ಮುಂಬೈನಲ್ಲಿ ಮತ್ತಿಬ್ಬರಿಗೆ ಒಮಿಕ್ರಾನ್ ವೈರಸ್ ದೃಢಪಟ್ಟಿದ್ದು, ಈ ಮೂಲಕ ಮಹಾರಾಷ್ಟ್ರದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಇವರಿಬ್ಬರಲ್ಲಿ ಒಬ್ಬರು ಅಮೆರಿಕದಿಂದ ಹಾಗೂ ಮತ್ತೊಬ್ಬರು ದಕ್ಷಿಣ ಆಫ್ರಿಕಾದಿಂದ ಬಂದಿದ್ದಾರೆ. ಇಬ್ಬರೂ ಫೈಜರ್ ಕೋವಿಡ್ ಲಸಿಕೆ ಪಡೆದಿದ್ದು, ಯಾವುದೇ ರೋಗ ಲಕ್ಷಣಗಳಿಲ್ಲ. ಆದರೂ ಅವರನ್ನು ಮುನ್ನೆಚ್ಚರಿಕಾ ಕ್ರಮವಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆಫ್ರಿಕಾದಲ್ಲಿ ಮೊದಲು ಪತ್ತೆಯಾಗಿದ್ದ ಒಮಿಕ್ರಾನ್ ಬಳಿಕ 38 ರಾಷ್ಟ್ರಗಳಿಗೆ ಹರಡಿದೆ. ಡಿಸೆಂಬರ್ 2 ರಂದು ಭಾರತದ ಮೊದಲೆರಡು ಕೇಸ್ಗಳು ಕರ್ನಾಟಕದಲ್ಲಿ ವರದಿಯಾಗಿದ್ದವು. ಇದೀಗ ಮಹಾರಾಷ್ಟ್ರದಲ್ಲಿ 10, ರಾಜಸ್ಥಾನದಲ್ಲಿ 9, ಗುಜರಾತ್ನಲ್ಲಿ 1 ಹಾಗೂ ದೆಹಲಿಯಲ್ಲಿ 1 ಕೇಸ್ ಪತ್ತೆಯಾಗಿದ್ದು, ದೇಶದಲ್ಲಿ ಈವರೆಗೆ ಒಟ್ಟು 23 ಮಂದಿಗೆ ಅಂಟಿದಂತಾಗಿದೆ.