ನವದೆಹಲಿ: ಬಂಗಾಳ ಕೊಲ್ಲಿಯಲ್ಲಿ ತೀವ್ರ ವಾಯುಭಾರ ಕುಸಿತ ಉಂಟಾಗಿದ್ದು, ಇದು ಸೋಮವಾರ ಬೆಳಿಗ್ಗೆ ಒಡಿಶಾ ಕರಾವಳಿಯನ್ನು ದಾಟಿದೆ. ಈ ಪರಿಣಾಮ ರಾಜ್ಯದಲ್ಲಿ ಭಾರಿ ಮಳೆಯಾಗಿದೆ.
ವಾಯುಭಾರ ಕುಸಿತದ ಪ್ರಭಾವದಿಂದಾಗಿ ಪಶ್ಚಿಮ ಮತ್ತು ಮಧ್ಯ ಭಾರತದಲ್ಲಿ ಭಾರಿ ಮಳೆಯಾಗುವ ನಿರೀಕ್ಷೆಯಿದೆ. ಒಡಿಶಾ ಮತ್ತು ಛತ್ತೀಸಗಡದಲ್ಲಿ ಸೋಮವಾರ ಹಾಗೂ ಮಧ್ಯಪ್ರದೇಶದಲ್ಲಿ ಮಂಗಳವಾರ ಬಿರುಸಿನ ಮಳೆ ಸುರಿಯುವ ಸಾಧ್ಯತೆಗಳಿವೆ ಎಂದು ಐಎಂಡಿ ಎಚ್ಚರಿಕೆ ನೀಡಿದೆ.
ಮುಂದಿನ ಎರಡು ದಿನಗಳಲ್ಲಿ ಉತ್ತರ ಕೊಂಕಣ, ಮಧ್ಯ ಮಹಾರಾಷ್ಟ್ರದಲ್ಲೂ ಮಳೆಯಾಗುವ ಸಾಧ್ಯತೆಯಿದೆ ಎಂದು ಐಎಂಡಿ ತಿಳಿಸಿದೆ.
ಒಡಿಶಾ ಪ್ರವಾಹ ಭೀತಿ: ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದಾಗಿ ಒಡಿಶಾದಲ್ಲಿ ಸೋಮವಾರ ಭಾರಿ ಮಳೆಯಾಗಿದ್ದು, ಪ್ರವಾಹ ಸ್ಥಿತಿ ನಿರ್ಮಾಣವಾಗುವ ಸಾಧ್ಯತೆಗಳಿವೆ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.