ನವದೆಹಲಿ: ಭಾರತದಲ್ಲಿ ಕಳೆದ 24ಗಂಟೆಗಳಲ್ಲಿ 10,929 ನೂತನ ಕೋವಿಡ್ ಸೋಂಕು ಪ್ರಕರಣ ವರದಿಯಾಗಿದ್ದು, 255 ದಿನಗಳ ಬಳಿಕ ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ ಭಾರೀ ಇಳಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶನಿವಾರ(ನವೆಂಬರ್ 06) ಬಿಡುಗಡೆಗೊಳಿಸಿರುವ ಅಂಕಿಅಂಶದಲ್ಲಿ ತಿಳಿಸಿದೆ.
ಕಳೆದ 24ಗಂಟೆಗಳಲ್ಲಿ 392 ಮಂದಿ ಸಾವನ್ನಪ್ಪಿದ್ದಾರೆ. ಸುಮಾರು 12,509 ಮಂದಿ ಕೋವಿಡ್ ನಿಂದ ಚೇತರಿಸಿಕೊಂಡಿದ್ದಾರೆ. ಭಾರತದಲ್ಲಿ ಈವರೆಗೆ ಕೋವಿಡ್ ನಿಂದ 4.60 ಲಕ್ಷಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಏತನ್ಮಧ್ಯೆ ಕೋವಿಡ್ ಸೋಂಕಿನಿಂದ 3.37 ಕೋಟಿ ಮಂದಿ ಗುಣಮುಖರಾಗಿದ್ದಾರೆ ಎಂದು ವರದಿ ವಿವರಿಸಿದೆ.
ಸತತ 29 ದಿನಗಳಿಂದ ದಿನಂಪ್ರತಿ 20,000ಸಾವಿರಕ್ಕಿಂತ ಕಡಿಮೆ ಪ್ರಮಾಣದಲ್ಲಿ ಕೋವಿಡ್ 19 ಸೋಂಕು ಪ್ರಕರಣ ವರದಿಯಾಗುತ್ತಿದೆ. ಅಲ್ಲದೇ ಕಳೆದ 132 ದಿನಗಳಿಂದ ಪ್ರತಿದಿನ 50,000ಸಾವಿರಕ್ಕಿಂತ ಕಡಿಮೆ ಪ್ರಮಾಣದಲ್ಲಿ ಕೋವಿಡ್ ಪತ್ತೆಯಾಗುತ್ತಿದೆ.
ದೇಶಾದ್ಯಂತ ಈವರೆಗೆ 61.39 ಕೋಟಿ ಮಂದಿಗೆ ಪರೀಕ್ಷೆ ನಡೆಸಲಾಗಿದೆ. ಪ್ರತಿದಿನದ ಪಾಸಿಟಿವಿಟಿ ದರ ಶೇ.1.35ರಷ್ಟಿದ್ದು, ವಾರದ ಪಾಸಿಟಿವಿಟಿ ದರ ಶೇ.1.27ರಷ್ಟಿದೆ ಎಂದು ಅಂಕಿಅಂಶ ಹೇಳಿದೆ.