ಜಿನಿವಾ: ಕೋವಿಡ್-19 ರೂಪಾಂತರಿ ಓಮಿಕ್ರಾನ್ ಹೊಸ ತಳಿಯಿಂದ ಇಲ್ಲಿಯವರೆಗೂ ಯಾವುದೇ ಸಾವಿನ ಪ್ರಕರಣಗಳು ವರದಿಯಾಗಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಶುಕ್ರವಾರ ಹೇಳಿದೆ. ಹೊಸ ರೂಪಾಂತರದೊಂದಿಗೆ ಓಮಿಕ್ರಾನ್ ಸೋಂಕು ಕಾಣಿಸಿಕೊಂಡಿರುವ ರಾಷ್ಟ್ರಗಳ ಸಂಖ್ಯೆ ಹೆಚ್ಚಾಗುತ್ತಿದ್ದರೂ ಇಲ್ಲಿಯವರೆಗೂ ಯಾವುದೇ ಸಾವಿನ ಪ್ರಕರಣ ವರದಿಯಾಗಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.
ಇಲ್ಲಿಯವರೆಗೂ ಯಾವುದೇ ಓಮಿಕ್ರಾನ್ ಸಂಬಂಧಿತ ಸಾವಿನ ಪ್ರಕರಣಗಳನ್ನು ನೋಡಿಲ್ಲ ಎಂದು ಡಬ್ಲ್ಯೂ ಹೆಚ್ ಒ ವಕ್ತಾರ ಕ್ರಿಶ್ಚಿಯನ್ ಲಿಂಡ್ಮಿಯರ್ ಸುದ್ದಿಗಾರರಿಗೆ ತಿಳಿಸಿದರು. ಎಲ್ಲಾ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸುತ್ತಿದ್ದೇವೆ, ಇನ್ನೂ ಹೆಚ್ಚಿನ ಸಾಕ್ಷ್ಯಾಧಾರಗಳನ್ನು ಹುಡುಕುತ್ತೇವೆ. ಹೆಚ್ಚಿನ ರಾಷ್ಟ್ರಗಳು ಜನರಲ್ಲಿ ಪರೀಕ್ಷೆ ನಡೆಸುತ್ತಿದ್ದು, ಓಮಿಕ್ರಾನ್ ರೂಪಾಂತರ ಪತ್ತೆ ಹಚ್ಚುವ ಕಾರ್ಯದಲ್ಲಿ ತೊಡಗಿವೆ, ಇನ್ನೂ ಹೆಚ್ಚಿನ ಕೇಸ್ ಗಳು, ಮಾಹಿತಿಯನ್ನು ಪತ್ತೆ ಮಾಡುತ್ತೇವೆ ಎಂದು ಅವರು ಹೇಳಿದರು.