ಕೋವಿಡ್ ರೂಪಾಂತರಿ ಒಮಿಕ್ರಾನ್ ಮೂರನೇ ಅಲೆಯಾಗುವ ಸಾಧ್ಯತೆ ಇದ್ದು, ಸಂಭವನೀಯ ಮೂರನೇ ಅಲೆ ಎದುರಿಸಲು ಆಸ್ಪತ್ರೆಯಲ್ಲಿ ಮೂಲಸೌಕರ್ಯಗಳು ಸಿದ್ಧವಾಗಿರುವಂತೆ ನೋಡಿಕೊಳ್ಳುವಂತೆ ಕೇಂದ್ರ ಸರ್ಕಾರ ರಾಜ್ಯದ ಸರ್ಕಾರಗಳಿಗೆ ಸೂಚನೆ ನೀಡಿದೆ.
ಒಮಿಕ್ರಾನ್ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೆಲವು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ, ನಿರ್ಣಾಯಕ ಔಷಧಿಗಳ ಸಾಕಷ್ಟು ದಾಸ್ತಾನು ಮಾಡಿಕೊಳ್ಳುವಂತೆ ಕೇಂದ್ರ ಸೂಚನೆ ನೀಡಿದೆ.
ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ರಾಜ್ಯ ಸರ್ಕಾರದ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿ, ತುರ್ತು ಪ್ರತಿಕ್ರಿಯೆ ಮತ್ತು ಆರೋಗ್ಯ ವ್ಯವಸ್ಥೆಯ ಸನ್ನದ್ಧತೆಯ ಪ್ಯಾಕೇಜ್ನ ವೆಚ್ಚವನ್ನು ಕೇಂದ್ರ ಮೇಲ್ವಿಚಾರಣೆ ಮಾಡುತ್ತಿದೆ. ರಾಜ್ಯ ಸರ್ಕಾರಗಳು ಹೊಂದಾಣಿಕೆಯ ಅನುದಾನವನ್ನು ತ್ವರಿತವಾಗಿ ಬಿಡುಗಡೆ ಮಾಡಬೇಕು ಎಂದು ಹೇಳಿದರು.
ಕ್ಷೇತ್ರ ಮಟ್ಟದಲ್ಲಿ ವೆಂಟಿಲೇಟರ್ಗಳು, ಪಿಎಸ್ಎ ಪ್ಲಾಂಟ್ಗಳು, ಆಮ್ಲಜನಕ ಸಾಂದ್ರೀಕರಣ ಸೇರಿದಂತೆ ಮೂರನೇ ಅಲೆ ಎದುರಿಸಲು ಆರೋಗ್ಯ ಸೌಲಭ್ಯಗಳು ಹೊಂದಿವೆ ಎಂದು ಖಚಿತಪಡಿಸಿಕೊಳ್ಳಬೇಕು ಮತ್ತು ಕೇಂದ್ರ ಸರ್ಕಾರ ಪೂರೈಸಿದ ಅನೇಕ ವೆಂಟಿಲೇಟರ್ಗಳು ಇನ್ನೂ ಕೆಲವು ಆಸ್ಪತ್ರೆಗಳಲ್ಲಿ ಪ್ಯಾಕ್ ಓಪನ್ ಮಾಡದೆ ಮತ್ತು ಬಳಕೆಯಾಗದೆ ಇವೆ ಈ ಬಗ್ಗೆಯೂ ಗಮನ ಹರಿಸಬೇಕು ಎಂದು ಸೂಚಿಸಿದ್ದಾರೆ.