ವಾಷಿಂಗ್ಟನ್: ಹವಾಮಾನ ವೈಪರೀತ್ಯದಿಂದಾಗಿ ಡಲ್ಲಾಸ್ ಫೋರ್ಟ್ ವರ್ತ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಕಳೆದ 24 ಗಂಟೆಯಲ್ಲಿ 250ಕ್ಕೂ ಹೆಚ್ಚಿನ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಿರುವ ಘಟನೆ ನಡೆದಿದೆ.
ಟೆಕ್ಸಾಸ್‌ನತ್ತ ಬೀಸುತ್ತಿದ್ದ ಚಂಡಮಾರುತ ಹಾಗೂ ಬಿರುಗಾಳಿಯ ವಾತಾವರಣವು ಡಿಎಫ್‌ಡಬ್ಲ್ಯೂನ 700ಕ್ಕೂ ಹೆಚ್ಚು ವಿಮಾನಗಳ ಮೇಲೆ ಪರಿಣಾಮ ಬೀರಿದೆ.
ಈ ಕುರಿತ ವಿಡಿಯೋವನ್ನು ಸೋಶಿಯಲ್ ಮೀಡಿಯಾ ಎಕ್ಸ್ ಖಾತೆಯಲ್ಲಿ ವಿಮಾನಯಾನ ಸಂಸ್ಥೆ ಹಂಚಿಕೊಂಡಿದೆ. ಗಂಟೆಗೆ 80 ಕಿಮೀ ವೇಗದಲ್ಲಿ ಬೀಸುತ್ತಿದ್ದ ಗಾಳಿಯ ರಭಸಕ್ಕೆ ಅಮೇರಿಕನ್ ಏರ್‌ಲೈನ್ಸ್‌ನ 737-800 ವಿಮಾನವು ಆಟಿಕೆಯಂತೆ ಆಡುತ್ತಿರುವುದು ಕಂಡುಬಂದಿದೆ.
ಡಲ್ಲಾಸ್-ಫೋರ್ಟ್ ವರ್ತ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಕಳೆದ 24 ಗಂಟೆಯಲ್ಲಿ ಸುಮಾರು 250 ವಿಮಾನಗಳ ಹಾರಾಟವನ್ನು ರದ್ದುಗೊಳಿಸಿದೆ. 500ಕ್ಕೂ ಹೆಚ್ಚು ವಿಮಾನಗಳ ಹಾರಾಟವನ್ನು ವಿಳಂಬಗೊಳಿಸಿದೆ ಎಂದು ತಿಳಿದುಬಂದಿದೆ.
ಡಲ್ಲಾಸ್-ಫೋರ್ಟ್ ವರ್ತ್ ಮೂಲಕ ಪೂರ್ವ ಟೆಕ್ಸಾಸ್‌ನತ್ತ ತೀವ್ರ ಚಂಡಮಾರುತ ಸಂಭವಿಸಿದೆ ಸುಮಾರು 3 ಸೆ.ಮೀ ನಷ್ಟು ಆಲಿಕಲ್ಲು ಸಹಿತ ಮಳೆ ಉಂಟಾಗಿದೆ. ಮುಂದಿನ ಕೆಲ ಗಂಟೆಗಳ ಕಾಲ 2 ಸೆ.ಮೀ ನಷ್ಟು ಮಳೆಯಾಗುವ ಸಾಧ್ಯತೆಯಿದೆ.
ಆದ್ದರಿಂದ ಭಾರೀ ಮಳೆಯು ಪ್ರವಾಹ ಸಮಸ್ಯೆಗಳನ್ನು ಉಂಟುಮಾಡಬಹುದು, ಮುನ್ನೆಚ್ಚರಿಕೆ ತೆಗೆದುಕೊಳ್ಳಿ, ಪ್ರವಾಹ ಪರಿಸ್ಥಿತಿಯಲ್ಲಿ ವಿಮಾನಗಳ ಹಾರಾಟ ನಡೆಸದಂತೆ ಎನ್‌ಡಬ್ಲ್ಯೂಎಸ್ ಫೋರ್ಟ್ ವರ್ತ್ ತನ್ನ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ.

