ಸ್ಯಾಕ್ರಮೆಂಟೊ: ಕ್ಯಾಲಿಫೋರ್ನಿಯಾದ ಗಾರ್ಡನ್ ಗ್ರೋವ್‌ನಲ್ಲಿರುವ ಏರೋಸ್ಪೇಸ್ ಪ್ಲಾಸ್ಟಿಕ್ ಕಾರ್ಖಾನೆಯ ಟ್ಯಾಂಕ್‌ನಲ್ಲಿ ಕೆಮಿಕಲ್ ಲೀಕ್ ಆಗುತ್ತಿದ್ದು, 40 ಸಾವಿರ ಜನರನ್ನು ಸ್ಥಳಾಂತರಿಸಲು ಸರ್ಕಾರ ಆದೇಶಿಸಿದೆ.
ಬೃಹತ್ ಟ್ಯಾಂಕ್‌ನಲ್ಲಿದ್ದ 22,700 – 26,500 ಲೀಟರ್ ಮೀಥೈಲ್ ಮೆಥಾಕ್ರಿಲೇಟ್ ಆವಿಯಾಗಿ ಗಾಳಿಯಲ್ಲಿ ಸೇರಿಕೊಳ್ಳುತ್ತಿದೆ. ರಾಸಾಯನಿಕ ಸೋರಿಕೆ ತಡೆಯಲು ಸಾಧ್ಯವಾಗುತ್ತಿಲ್ಲ. ಆ ಟ್ಯಾಂಕ್ ವಿಫಲಗೊಳ್ಳುತ್ತದೆ ಅಥವಾ ಸ್ಫೋಟಗೊಳ್ಳುತ್ತದೆ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಕೆಮಿಕಲ್ ಗಾಳಿಯ ಜೊತೆ ಸೇರುತ್ತಿರುವುದರಿಂದ ಅಲ್ಲಿನ ಪರಿಸ್ಥಿತಿ ಹದಗೆಟ್ಟಿದೆ. ಈಗ ಉಳಿದಿರುವುದು ಎರಡು ಆಯ್ಕೆಗಳು ಮಾತ್ರ, ಟ್ಯಾಂಕ್ ವಿಫಲ ಗೊಳಿಸುವುದು ಅಥವಾ ಅದಾಗೇ ಸ್ಫೋಟಗೊಳ್ಳುವುದು. ಈ ಎರಡಕ್ಕೂ ನಾವು ತಯಾರಿ ಮಾಡಿಕೊಂದ್ದೇವೆ. ಈಗಾಗಲೇ ಜನರ ಸ್ಥಳಾಂತರ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
12ಕ್ಕೂ ಹೆಚ್ಚು ಶಾಲೆಗಳು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಅಧಿಕಾರಿಗಳು ಆರಂಭದಲ್ಲಿ ಗುರುವಾರ ಜನರನ್ನು ಸ್ಥಳಾಂತರಿಸುವ ಆದೇಶ ಹೊರಡಿಸಿದ್ದರು. ಪರಿಸ್ಥಿತಿ ಸುಧಾರಿಸಿದಾಗ ಆ ಆದೇಶಕ್ಕೆ ತಡೆ ನೀಡಲಾಗಿತ್ತು. ಮತ್ತೆ ಗ್ಯಾಸ್ ಸೋರಿಕೆಯಿಂದ ಸ್ಥಳಾಂತರಿಸುವ ಆದೇಶಗಳನ್ನು ಶುಕ್ರವಾರ ಮತ್ತೆ ಹೊರಡಿಸಲಾಗಿದೆ.

