ಡೆಹ್ರಾಡೂನ್: ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಬರೋಬ್ಬರಿ 600 ಅಡಿ ಆಳದ ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಉತ್ತರಾಖಂಡದ ಮಸ್ಸೂರಿ ಬಳಿ ಸಂಭವಿಸಿದೆ.

ಅಪಘಾತ ಸಂಭವಿಸಿದ ಮಾಹಿತಿ ಸಿಗುತ್ತಿದ್ದಂತೆ ಸ್ಥಳೀಯ ಪೊಲೀಸರು, ಎಸ್‌ಡಿಆರ್‌ಎಫ್ ಮತ್ತು 108 ತುರ್ತು ಆಂಬ್ಯುಲೆನ್ಸ್ ಸಿಬ್ಬಂದಿ ರಕ್ಷಣಾ ಕಾರ್ಯಕ್ಕಾಗಿ ಧಾವಿಸಿದ್ದಾರೆ. ಆದರೆ, ದುರ್ಘಟನೆ ಸಂಭವಿಸಿದ ಜಾಗವು ಅತ್ಯಂತ ಕಡಿದಾದ ಕಣಿವೆ ಹಾಗೂ ದಟ್ಟವಾದ ಗಿಡಗಂಟಿಗಳಿಂದ ಕೂಡಿದ್ದರಿಂದ ರಕ್ಷಣಾ ಕಾರ್ಯಾಚರಣೆಗೆ ತೀವ್ರ ಹಿನ್ನಡೆಯಾಗಿತ್ತು.

ಕೊನೆಗೆ ಎಸ್‌ಡಿಆರ್‌ಎಫ್ ಸಿಬ್ಬಂದಿ ಹಗ್ಗಗಳ ಸಹಾಯದಿಂದ ಕಷ್ಟಪಟ್ಟು ಪ್ರಪಾತದ ತಳಕ್ಕೆ ಇಳಿದು, ಅಪ್ಪಚ್ಚಿಯಾದ ಕಾರಿನ ಅವಶೇಷಗಳ ನಡುವಲ್ಲಿ ಸಿಲುಕಿದ್ದ ಮೃತದೇಹಗಳನ್ನು ಹೊರತೆಗೆದಿದ್ದಾರೆ. ಘಟನೆ ವೇಳೆ ಉನ್ನತ ಆಡಳಿತಾಧಿಕಾರಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿ ರಕ್ಷಣಾ ಕಾರ್ಯದ ಉಸ್ತುವಾರಿ ವಹಿಸಿದ್ದರು.

ಮ್ರಾಥಮಿಕ ಮಾಹಿತಿ ಪ್ರಕಾರ ಕಾರು ಸುಮಾರು 600 ಮೀಟರ್ ಆಳದ ಕಂದಕಕ್ಕೆ ಬಿದ್ದಿದ್ದು, ಒಳಗಿದ್ದ ನಾಲ್ವರೂ ಮೃತಪಟ್ಟಿರುವುದು ಖಚಿತವಾಗಿದೆ ಎಂದು ಮಸ್ಸೂರಿ ಪೊಲೀಸರು ತಿಳಿಸಿದ್ದಾರೆ. ಮೃತದೇಹಗಳ ಗುರುತು ಪತ್ತೆ ಹಚ್ಚುವ ಕಾರ್ಯ ಪ್ರಗತಿಯಲ್ಲಿದ್ದು ಜೊತೆಗೆ ಕಾನೂನು ಪ್ರಕ್ರಿಯೆಗಳು ಮುಂದುವರಿದಿವೆ.