ನ್ಯೂಯಾರ್ಕ್: ಅಮೆರಿಕಾದ ಟೆಕ್ಸಾಸ್‌ನಲ್ಲಿ ಸಂಭವಿಸಿದ ಭೀಕರ ಸರಣಿ ಅಪಘಾತದಲ್ಲಿ ಒಬ್ಬರು ಯುವತಿ ಸೇರಿದಂತೆ ನಾಲ್ವರು ಭಾರತೀಯರು ಸಾವನ್ನಪ್ಪಿದ್ದಾರೆ. ಐದು ವಾಹನಗಳ ಮಧ್ಯೆ ಅಪಘಾತ ಸಂಭವಿಸಿದ್ದು, ವೇಗವಾಗಿ ಬಂದ ಟ್ರಕೊಂದು ಭಾರತೀಯರಿದ್ದ ಕಾರಿನ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದೆ.
ಕೂಡಲೇ ಕಾರಿನಲ್ಲಿ ಬೆಂಕಿ ಆವರಿಸಿದ್ದು, ಕಾರಿನಲ್ಲಿದ್ದ ನಾಲ್ವರು ಭಾತೀಯರು ಸುಟ್ಟು ಕರಕಲಾಗಿದ್ದಾರೆ. ಇವರೆಲ್ಲರೂ ಕಾರು ಪೂಲಿಂಗ್ ಅಪ್ಲಿಕೇಶನ್ ಸಹಾಯದಿಂದ ಕಾರು ಬುಕ್ ಮಾಡಿಕೊಂಡು ಒಂದೇ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಅಪಘಾತದ ನಂತರ ಇವರ ದೇಹ ಸಂಪೂರ್ಣ ಸುಟ್ಟು ಕರಕಲಾಗಿದೆ. ಕಾರು ಪೂಲಿಂಗ್‌ನಲ್ಲಿ ಇವರು ಮೊದಲೇ ಬುಕ್ ಮಾಡಿದ್ದರಿಂದಾಗಿ ಮೃತಪಟ್ಟಿರುವುದೇ ಇವರೇ ನಾಲ್ವರು ಎಂಬುದು ಗೊತ್ತಾಗಿದೆ. ಆದರೆ ಮೃತರ ದೇಹಗಳನ್ನು ಗುರುತಿಸಲು ಅಧಿಕಾರಿಗಳು ಡಿಎನ್‌ಒ ಮೊರೆ ಹೋಗಿದ್ದಾರೆ. ಅಮೆರಿಕಾದ ಅರ್ಕಾನ್ಸಾಸ್‌ನ ಬೆಂಟನ್‌ವಿಲ್ಲೆಗೆ ತೆರಳುತ್ತಿದ್ದಾಗ ಈ ದುರಂತ ಸಂಭವಿಸಿದೆ. ಈ ದುರಂತದಲ್ಲಿ ಮೃತಪಟ್ಟವರನ್ನು ಆರ್ಯನ್ ರಘುನಾಥ್ ಓರಂಪಾಟಿ, ಫಾರೂಕ್ ಶೇಕ್, ಲೋಕೇಶ್ ಪಾಲಾಚಾರ್ಲ ಮತ್ತು ದರ್ಶಿನಿ ವಾಸುದೇವನ್ ಎಂದು ಗುರುತಿಸಲಾಗಿದೆ.

