ಫಿರೋಝ್‌ಪುರ: ಆಮ್ ಆದ್ಮಿ ಪಕ್ಷದ ನಾಯಕ ಗುರುಪ್ರೀತ್ ಸಿಂಗ್ ಗೋಪಿ ಅವರನ್ನು ಶಸ್ತ್ರಸಜ್ಜಿತ ದುಷ್ಕರ್ಮಿಗಳು ಬೈಕ್‌ ನಲ್ಲಿ ಬೆನ್ನಟ್ಟಿ ಗುಂಡು ಹಾರಿಸಿ ಹತ್ಯೆ ಮಾಡಿರುವ ಘಟನೆ ಪಂಜಾಬ್‌ ನ ಮಮ್‌ಡೋಟ್ ಪಟ್ಟಣದಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗೋಪಿ ಅವರು ಹರ್‌ಪ್ರೀತ್ ಎಂಬವರೊಂದಿಗೆ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಅವರ ಬೈಕ್‌ ಅನ್ನು ಬೆನ್ನಟ್ಟಿ ಗುಂಡು ಹಾರಿಸಿದ್ದಾರೆ. ಗುಂಡಿನ ದಾಳಿಯಲ್ಲಿ ಗೋಪಿ ಮೃತಪಟ್ಟಿದ್ದಾರೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಭೂಪಿಂದರ್ ಸಿಂಗ್ ಸಿಧು ತಿಳಿಸಿದ್ದಾರೆ.

ಗೋಪಿ ಮತ್ತು ಹರ್‌ಪ್ರೀತ್ ಅವರನ್ನು ಕೆಲವು ಸ್ನೇಹಿತರು ಕಾರಿನಲ್ಲಿ ಹಿಂಬಾಲಿಸುತ್ತಿದ್ದರು. ದಾಳಿಕೋರರು ಗೋಪಿ ಅವರ ಬೈಕ್‌ ಮೇಲೆ ಗುಂಡು ಹಾರಿಸಿದ ಬಳಿಕ ಅವರ ಸ್ನೇಹಿತರು ಇದ್ದ ಕಾರಿನ ಮೇಲೂ ಗುಂಡು ಹಾರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಗೋಪಿ ಹತ್ಯೆಯ ಹಿಂದೆ ಹಳೆಯ ವಿವಾದ ಇರುವ ಶಂಕೆ ಇದೆ ಎಂದು ಎಸ್‌ಎಸ್‌ಪಿ ಸಿಧು ಹೇಳಿದ್ದಾರೆ. ಚುನಾವಣೆಗೆ ಸಂಬಂಧಿಸಿದ ವಿವಾದವೂ ತನಿಖೆಯ ಪ್ರಮುಖ ಅಂಶವಾಗಿದೆ ಎಂದು ಅವರು ತಿಳಿಸಿದ್ದಾರೆ.

‘ಎರಡೂ ಕಡೆಯವರ ನಡುವೆ ಹಳೆಯ ವಿವಾದವಿತ್ತು. ದಾಳಿಕೋರರನ್ನು ಗುರುತಿಸಲಾಗಿದೆ. ಅವರನ್ನು ಬಂಧಿಸಲು ಪೊಲೀಸ್ ತಂಡಗಳನ್ನು ರಚಿಸಲಾಗಿದೆ. ಆದಷ್ಟು ಬೇಗ ಆರೋಪಿಗಳನ್ನು ಬಂಧಿಸಲಾಗುವುದು’ ಎಂದು ಸಿಧು ಹೇಳಿದ್ದಾರೆ.