ಢಾಕಾ: ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ಹಿಂಸಾತ್ಮಕ ದಾಳಿ ಕೋಮುವಾದಕ್ಕಿಂತಲೂ ಹೆಚ್ಚು ರಾಜಕೀಯ ಪ್ರೇರಿತವಾಗಿದೆ ಎಂದು ಬಾಂಗ್ಲಾ ಸರ್ಕಾರದ ಸಲಹೆಗಾರ ಮುಹಮ್ಮದ್ ಯೂನಸ್ ಹೇಳಿಕೆ ನೀಡಿದ್ದಾರೆ.
ಬಾಂಗ್ಲಾದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ನಡೆದ ದಾಳಿಯ ಘಟನೆಗಳನ್ನು ಭಾರತ ಬಿಂಬಿಸಿದ ರೀತಿಯನ್ನು ಯೂನಸ್ ಪ್ರಶ್ನಿಸಿದ್ದಾರೆ. ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಹಿಂದೂಗಳ ಮೇಲಿನ ದಾಳಿ ಒಂದು ರಾಜಕೀಯ ಪ್ರೇರಿತವಾಗಿದೆ. ಇಲ್ಲಿನ ಹಿಂದೂಗಳು ಶೇಖ್ ಹಸೀನಾ ನೇತೃತ್ವದ ಅವಾಮಿ ಲೀಗ್ ಸರ್ಕಾರವನ್ನು ಬೆಂಬಲಿಸಿದ್ದಾರೆ. ಆದ್ದರಿಂದ ಈ ದೌರ್ಜನ್ಯ ಸಂಭವಿಸುತ್ತಿದೆ ಎಂದರು.
ಭಾರತದ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಅವರು, ನಾನು ಇದನ್ನು ಮೋದಿಯವರಿಗೂ ಹೇಳಿದ್ದೇನೆ. ಈ ಸಮಸ್ಯೆ ಹಲವಾರು ಆಯಾಮಗಳನ್ನು ಹೊಂದಿದೆ. ಹಸೀನಾ ಮತ್ತು ಅವಾಮಿ ಲೀಗ್‌ನ ದುಷ್ಕ್ರತ್ಯಗಳ ನಂತರ ದೇಶವು ಕ್ರಾಂತಿಯನ್ನು ಎದುರಿಸಿತು. ಈ ವೇಳೆ ಅವರೊಂದಿಗೆ ಇದ್ದವರು ಕೂಡ ದಾಳಿಗಳನ್ನು ಎದುರಿಸಿದರು ಎಂದು ಹೇಳಿದರು.
ಇದು ರಾಜಕೀಯವೇ ಹೊರತು ಕೋಮುವಾದವಲ್ಲ. ಭಾರತ ಇದನ್ನು ದೊಡ್ಡ ರೀತಿಯಲ್ಲಿ ಪ್ರಚಾರ ಮಾಡುತ್ತಿದೆ. ನಾವು ಏನೂ ಮಾಡುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಲಿಲ್ಲ. ನಾವು ಎಲ್ಲವನ್ನೂ ಮಾಡುತ್ತಿದ್ದೇವೆ ಎಂದರು.

