ಮೈದುಗುರಿ: ಈಶಾನ್ಯ ನೈಜೀರಿಯಾದಲ್ಲಿ ಸೇನೆಯು ನಡೆಸಿದ ವೈಮಾನಿಕ ದಾಳಿಯಲ್ಲಿ 100ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.
ಜಿಹಾದಿಗಳು, ಬಂಡುಕೋರರನ್ನು ಗುರಿಯಾಗಿಸಿ ನಡೆಸಿದ ದಾಳಿಯು ಜನನಿಬಿಡ ಮಾರುಕಟ್ಟೆಗೆ ಅಪ್ಪಳಿಸಿತ್ತು. ಜಿಲ್ಲಿ ಮಾರುಕಟ್ಟೆ ಗುರಿಯಾಗಿಸಿ ನೈಜೀರಿಯಾದ ವಾಯುಪಡೆಯ ಫೈಟರ್ ಜೆಟ್‌ಗಳು ದಾಳಿ ನಡೆಸಿವೆ. ಭಯೋತ್ಪಾದಕ ವಿರೋಧ ಕಾರ್ಯಾಚರಣೆಯಲ್ಲಿ ಬೊಕೊ ಹರಾಮ್ ಗುಂಪನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ.
ಸಾವು-ನೋವಿನ ಸಂಖ್ಯೆ ಇನ್ನು ಹೆಚ್ಚುವ ಭೀತಿ ಕಾಡುತ್ತಿದೆ. ಮೃತರಲ್ಲಿ ಮಹಿಳೆಯರು, ಮಕ್ಕಳು ಸೇರಿದ್ದಾರೆ. ಇದು ಗುರಿ ತಪ್ಪಿದ ದಾಳಿ ಎಂದು ತಿಳಿದು ಬಂದಿದೆ. ಮತ್ತೊಂದೆಡೆ ದಾಳಿಯಲ್ಲಿ ಅನೇಕ ಭಯೋತ್ಪಾಕರು ಸಾವಿಗೀಡಾಗಿದ್ದಾರೆ ಎಂದು ನೈಜೀರಿಯಾದ ಸೇನೆ ಹೇಳಿದೆ.

