ಉತ್ತರ ಕೊರಿಯಾ : ಭೂಕುಸಿತ, ಪ್ರವಾಹ, ಪ್ರಕೃತಿ ವಿಕೋಪಗಳು ಆಗದಂತೆ ಮುಂಜಾಗೃತೆ ವಹಿಸಬಹುದು. ಆದರೆ ಆಗದೆಯೇ ಇರುವಂತೆ ತಡೆಯುವುದು ಮಾನವನ ಕೈಯಲ್ಲಿ ಅಸಾಧ್ಯವಾದ ವಿಚಾರ. ಆದರೆ ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜೋಂಗ್ ಪ್ರವಾಹ ಭೂಕುಸಿತವನ್ನು ತಡೆಯಲು ವಿಫಲರಾಗಿದ್ದಾರೆ ಎಂದು 30 ಅಧಿಕಾರಿಗಳನ್ನು ಗಲ್ಲಿಗೇರಿಸಿದ್ದಾರೆ ಎಂದು ದಕ್ಷಿಣ ಕೊರಿಯಾದ ಹಲವು ಮಾಧ್ಯಮಗಳು ವರದಿ ಮಾಡಿವೆ.
ಹಲವು ವಿಚಿತ್ರ ಆದೇಶಗಳಿಂದಾಗಿ ಸದಾ ಸುದ್ದಿಯಲ್ಲಿರುವ ಉತ್ತರ ಕೊರಿಯಾ ನಾಯಕ ಕಿಮ್ ಜೋಂಗ್ ಈಗ ಈ ವಿಚಾರದಿಂದ ಮತ್ತೆ ಸುದ್ದಿಯಲ್ಲಿದ್ದಾರೆ. ಉತ್ತರ ಕೊರಿಯಾದಲ್ಲಿ ಇತ್ತೀಚೆಗೆ ಸಂಭವಿಸಿದ ಭೂಕುಸಿತ ಹಾಗೂ ಪ್ರವಾಹದಿಂದಾಗಿ 4 ಸಾವಿರಕ್ಕೂ ಅಧಿಕ ಮನೆಗಳು ಹಾನಿಗೊಳಗಾಗಿದ್ದು, 15 ಸಾವಿರಕ್ಕೂ ಅಧಿಕ ಮಂದಿಯನ್ನು ಸ್ಥಳಾಂತರಿಸಲಾಗಿತ್ತು.
ಈ ನೈಸರ್ಗಿಕ ವಿಕೋಪ ದುರಂತದಲ್ಲಿ ಅಂದಾಜು 1000 ಜನ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದ್ದು, ಈ ಹಿನ್ನೆಲೆಯಲ್ಲಿ ಭೂಕುಸಿತ ಪ್ರವಾಹದ ವೇಳೆ ಸಾವುನೋವು ತಡೆಯಲು ವಿಫಲರಾದ 30 ಸರ್ಕಾರಿ ಅಧಿಕಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸಲು ಉತ್ತರ ಕೊರಿಯಾ ನಾಯಕ ಕಿಮ್ ಜೊಂಗ್ ಆದೇಶಿಸಿದ್ದಾರೆ ಎಂದು ದಕ್ಷಿಣ ಕೊರಿಯಾದ ಮಾಧ್ಯಮಗಳು ವರದಿ ಮಾಡಿವೆ.
ಕಳೆದ ತಿಂಗಳ ಕೊನೆಯಲ್ಲಿ ಪ್ರವಾಹ ಪೀಡಿತ ಪ್ರದೇಶದಲ್ಲಿ 20 ರಿಂದ 30 ಸಿಬ್ಬಂದಿಯನ್ನು ಒಂದೇ ಸಮಯದಲ್ಲಿ ಗಲ್ಲಿಗೇರಿಸಲು ನಿರ್ಧರಿಸಲಾಯ್ತು ಎಂದು ಅಧಿಕಾರಿ ಹೇಳಿದ್ದಾಗಿ ದಕ್ಷಿಣ ಕೊರಿಯಾ ಮಾಧ್ಯಮಗಳು ವರದಿ ಮಾಡಿವೆ. ಆದರೆ ಮರಣದಂಡನೆಗೊಳಗಾದ ಅಧಿಕಾರಿಗಳ ಗುರುತನ್ನು ಇದುವರೆಗೆ ಬಹಿರಂಗಪಡಿಸಲಾಗಿಲ್ಲ.

