11 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ ಪ್ರಕರಣದಲ್ಲಿ ಹೆನ್ರಿ ಮ್ಯಾಕ್ಕಲಂ ಹಾಗೂ ಲಿಯೋನ್ ಬ್ರೌನ್ ಎಂಬ ಇಬ್ಬರು ಬರೋಬ್ಬರಿ 31 ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ್ದರು. ಇವರ ಮೇಲಿನ ರೇಪ್ & ಮರ್ಡರ್ ಕೇಸ್ ಖುಲಾಸೆಯಾಗಿದ್ದು, ನಾರ್ತ್ ಕೆರೊನಿಯಾ ಕೋರ್ಟ್ 75 ಮಿಲಿಯನ್ ( 550 ಕೋಟಿ ರೂ.) ಹಣವನ್ನು ಪರಿಹಾರವಾಗಿ ನೀಡಿದೆ.
1983ರಲ್ಲಿ 11 ವರ್ಷ ಬಾಲಕಿಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ಹೆನ್ರಿ, ಲಿಯೋನ್ರನ್ನು ಬಂಧಿಸಲಾಗಿತ್ತು. ಬಂಧನಕ್ಕೊಳಗಾದಾಗ ಹೆನ್ರಿಗೆ 19 ವರ್ಷ ಹಾಗೂ ಲಿಯೋನ್ಗೆ 15 ವರ್ಷ ವಯಸ್ಸಾಗಿತ್ತು. ಆಗ ಪ್ರಕರಣದ ತನಿಖೆ ನಡೆಸಿದ್ದ ಕೋರ್ಟ್ ಇಬ್ಬರಿಗೂ ಮರಣದಂಡನೆ ಶಿಕ್ಷೆಯನ್ನು ವಿಧಿಸಿತ್ತು. ಕೋರ್ಟ್ನ ಆದೇಶದ ವಿರುದ್ಧ ಕಾನೂನು ಹೋರಾಟ ನಡೆಸಿದ ಬಳಿಕ 2014ರಲ್ಲಿ ಇಬ್ಬರೂ ಪ್ರಕರಣದಿಂದ ಖುಲಾಸೆಗೊಂಡಿದ್ದರು. ಅಷ್ಟರಲ್ಲಿ ಆಗಲೇ ಬರೋಬ್ಬರಿ 31 ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ್ದ ಇಬ್ಬರು ತಮ್ಮ ಯವ್ವನವನ್ನು ಕಂಬಿಗಳ ಹಿಂದೆಯೇ ಕಳೆದಿದ್ದರು.ಇನ್ನು ಡಿಎನ್ಎ ಪರೀಕ್ಷೆಯಲ್ಲಿ ಇಬ್ಬರು ಅತ್ಯಾಚಾರವೆಸಗಿಲ್ಲ ಎಂಬುವುದು ಸಾಬೀತಾಗಿತ್ತು. ತಮ್ಮ ವಿರುದ್ಧದ ಸುಳ್ಳು ಆರೋಪ ಹಾಗೂ ಶಿಕ್ಷೆಯ ವಿರುದ್ಧ ಹೆನ್ರಿ, ಲಿಯೋನ್ ಮತ್ತೆ ಕೋರ್ಟ್ ಮೆಟ್ಟಿಲೇರಿದ್ದರು. ಇಬ್ಬರಿಗೂ ಆದ ನೋವು, ನಷ್ಟವನ್ನು ಪರಿಗಣಿಸಿದ ನಾರ್ತ್ ಕೆರೊಲಿನಾ ಕೋರ್ಟ್ ಈಗ 75 ಮಿಲಿಯನ್ ಹಣವನ್ನು ಪರಿಹಾರವಾಗಿ ನೀಡಿದೆ. ಜೈಲಿನಲ್ಲಿ ಕಳೆದ ಪ್ರತಿ ವರ್ಷಕ್ಕೂ 1 ಮಿಲಿಯನ್ ನಂತೆ ತಲಾ 31 ಮಿಲಿಯನ್ ಜೊತೆ ಹೆಚ್ಚುವರಿಯಾಗಿ 13 ಮಿಲಿಯನ್ ಸೇರಿಸಿ ಒಟ್ಟು 75 ಮಿಲಿಯನ್ ಹಣವನ್ನು ಇಬ್ಬರಿಗೂ ಪರಿಹಾರವಾಗಿ ನೀಡಲಾಗಿದೆ.
ಕೋರ್ಟ್ನ ಆದೇಶದ ಬಗ್ಗೆ ಸಂತತ ಹಂಚಿಕೊಂಡ ಹೆನ್ರಿ ಕೊನೆಗೂ ನಮಗೆ ಸ್ವಾತಂತ್ರ್ಯ ಸಿಕ್ಕಿದೆ ಎಂದಿದ್ದಾರೆ. ಜೈಲಿನಲ್ಲಿ ಇನ್ನೂ ನಮ್ಮಂತೆಯೇ ಅನೇಕ ಮುಗ್ಧರು ಶಿಕ್ಷೆ ಅನುಭವಿಸುತ್ತಿದ್ದಾರೆ. ಮಾಡದ ತಪ್ಪಿಗೆ ಅವರು ಅನುಭವಿಸುತ್ತಿರುವ ನೋವು ಸಹಿಸುವಂತಹದಲ್ಲ ಎಂದು ಲಿಯೋನ್ ಅಸಮಾಧಾನ ಹೊರ ಹಾಕಿದ್ದಾರೆ. ಹೆನ್ರಿ ಹಾಗೂ ಲಿಯೋನ್ ಇಬ್ಬರು ಕಪ್ಪು ವರ್ಣಿಯರಾಗಿದ್ದು, ಲಿಯೋನ್ ಅಂಗವೈಕಲ್ಯವನ್ನೂ ಹೊಂದಿದ್ದಾರೆ.
ಕಪ್ಪು ವರ್ಣೀಯರ ವಿರುದ್ಧ ಪೂರ್ವಗ್ರಹ ಪೀಡಿತರಾಗಿ ತನಿಖೆ ನಡೆಸಿದ್ದರಿಂದಲೇ ಹೆನ್ರಿ, ಲಿಯೋನ್ ಮಾಡದ ತಪ್ಪಿಗೆ ಶಿಕ್ಷ ಅನುಭವಿಸುವಂತಾಗಿದ್ದು ಎಂದು ಹಲವರು ಆರೋಪಿಸಿದ್ದಾರೆ. ಇನ್ನು ಕೆಲವರು ತನಿಖೆ ನಡೆಸಿದ ಪೊಲೀಸ್ ಅಧಿಕಾರಿಗಳಿಗೆ ಜೈಲು ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದ್ದಾರೆ. ಈ ಪ್ರಕರಣದಿಂದ ಹಲವರು ಅಮೆರಿಕದ ನ್ಯಾಯಾಲಯಗಳನ್ನು ಟೀಕಿಸುತ್ತಿದ್ದರೆ, ಇನ್ನು ಹಲವರು ಪರಿಹಾರ ನೀಡಿದ ಕೋರ್ಟ್ನ ತೀರ್ಮಾನವನ್ನು ಪ್ರಶಂಸಿಸಿದ್ದಾರೆ.
ಸುಳ್ಳು ಅತ್ಯಾಚಾರ ಕೇಸ್ನಲ್ಲಿ 31 ವರ್ಷ ಜೈಲು ಶಿಕ್ಷೆ; 550 ಕೋಟಿ ರೂ. ಪರಿಹಾರ ನೀಡಿದ ಕೋರ್ಟ್!
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.