ಭಾರತದಿಂದ ಅರಬ್ ರಾಷ್ಟ್ರಗಳಿಗೆ ಪ್ರಯಾಣ ಬೆಳೆಸಲು ಕಾಯುತ್ತಿರುವ ಪ್ರಯಾಣಿಕರಿಗೆ ಇದೀಗ ಗುಡ್ ನ್ಯೂಸ್ ಒಂದಿದ್ದು, ವಿಶ್ವ ಆರೋಗ್ಯ ಸಂಸ್ಥೆಯಿಂದ ದೃಢೀಕರಿಸಲ್ಪಟ್ಟ ಕೊರೋನಾ ಲಸಿಕೆ 2 ಡೋಸ್ಗಳನ್ನು ಸ್ವೀಕರಿಸಿದವರು ಅರಬ್ ರಾಷ್ಟ್ರಕ್ಕೆ ಬರಬಹುದು ಎಂದು ಅನುಮತಿ ಸಿಕ್ಕಿದೆ. ಇದರಲ್ಲಿ ಈ ಹಿಂದೆ ಅಮಾನತು ಮಾಡಿದ್ದ ದೇಶಗಳ ಪೈಕಿ 12 ರಾಷ್ಟ್ರಗಳ ಪ್ರಜೆಗಳಿಗೆ ಅವಕಾಶ ದೊರಕಿದೆ.
ದುಬೈನಲ್ಲಿ ಕೊರೋನಾ ಸಾಂಕ್ರಾಮಿಕದಿಂದಾಗಿ ಕಳೆದ 1 ವರ್ಷದಿಂದ ಮುಂದೂಡಲ್ಪಟ್ಟಿದ್ದ ದುಬೈ ವರ್ಲ್ಡ್ ಎಕ್ಸಪೋ 2020 ಅಕ್ಟೋಬರ್ 1ರಂದು ನಡೆಯಲಿದೆ. ಇದೇ ಕಾರಣಕ್ಕೆ ನಾಳೆಯಿಂದ ಪ್ರಯಾಣ ನಿರ್ಬಂಧಗಳನ್ನು ತೆಗೆದುಹಾಕುವ ನಿರ್ಧಾರಕ್ಕೆ ಅರಬ್ ರಾಷ್ಟ್ರ ಬಂದಿದೆ.
ಅರಬ್ ರಾಷ್ಟ್ರಗಳ ಬ್ಯುಸಿನೆಸ್ ಹಬ್ಗಳಲ್ಲಿ ಒಂದಾದ ದುಬೈ 1 ವರ್ಷಗಳ ಕಾಯುವಿಕೆಯ ಬಳಿಕ ಇದೀಗ ವರ್ಲ್ಡ್ ಎಕ್ಸ್ಪೋಗೆ ಮುಂದಾಗಿದೆ. ಪ್ರಾದೇಶಿಕ ವ್ಯಾಪಾರ ಹಾಗೂ ಪ್ರವಾಸೋದ್ಯಮ ಕೇಂದ್ರವಾದ ದುಬೈ ಆರ್ಥಿಕತೆಗೆ ಉತ್ತೇಜನ ನೀಡುವ ಸಲುವಾಗಿ ಈ ಮೇಳವನ್ನು ನಡೆಸುತ್ತದೆ. ಎಕ್ಸ್ಪೋ ಸಮಯದಲ್ಲಿ ಕೊರೋನಾ ನಿಯಂತ್ರಿಸಲು ಬೇಕಾದ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದಾಗಿ ಸಂಘಟಕರು ಹೇಳಿದ್ದಾರೆ.
ಭಾರತವನ್ನು ಹೊರತುಪಡಿಸಿ ಅರಬ್ ರಾಷ್ಟ್ರಕ್ಕೆ ಪ್ರಯಾಣ ಬೆಳೆಸಲು ಅನುಮತಿ ಪಡೆದ ರಾಷ್ಟ್ರಗಳ ಪೈಕಿ ಪಾಕಿಸ್ತಾನ, ಬಾಂಗ್ಲಾದೇಶ, ನೇಪಾಳ, ಶ್ರೀಲಂಕಾ, ವಿಯೆಟ್ನಾಂ, ನಮೀಬಿಯಾ, ಜಾಂಬಿಯಾ, ಕಾಂಗೋ , ಉಗಾಂಡಾ, ಸಿಯೆರಾ ಲಿಯೋನ್, ಲೈಬೀರಿಯಾ, ದಕ್ಷಿಣ ಆಫ್ರಿಕಾ, ನೈಜಿರೀಯಾ ಹಾಗೂ ಅಫ್ಘಾನಿಸ್ತಾನ ಸೇರಿದೆ.