ಪ್ರಧಾನಿ ಮೋದಿ ಮೂರು ದಿನಗಳ ಅಮೆರಿಕ ಪ್ರವಾಸದಲ್ಲಿದ್ದಾರೆ. ಇಂದು, ಅವರ ಭೇಟಿಯ ಮೊದಲ ದಿನ ಅಮೆರಿಕದ ಉನ್ನತ ಸಂಸ್ಥೆಗಳ ಸಿಇಓಗಳ ಜೊತೆ ಸಭೆ ನಡೆಸುತ್ತಿದ್ದಾರೆ. ಇದೇ ವೇಳೆ ಮೋದಿ ಆಯಪಲ್ ಸಂಸ್ಥೆ ಮುಖ್ಯಸ್ಥ ಟಿಮ್ ಕುಕ್ ಜೊತೆ ಕೂಡ ಪ್ರತ್ಯೇಕವಾಗಿ ಚರ್ಚೆ ನಡೆಸಲಿದ್ದಾರೆ ಅಂತ ಮಾಹಿತಿ ಲಭ್ಯವಿದೆ.
ಕ್ವಾಲ್ಕಮ್ ಸಿಇಓ ಕ್ರಿಶ್ಚಿಯಾನೊ ಆರ್ ಅಮೊನ್ ಜೊತೆಗೆ ಮಾತುಕತೆ ನಡೆಸಿದ ಪ್ರಧಾನಿ ಮೋದಿ ಭಾರತದಲ್ಲಿ ಬಂಡವಾಳ ಹೂಡಿಕೆಗೆ ಇರುವ ವ್ಯಾಪಕ ಅವಕಾಶಗಳ ಕುರಿತು ಚರ್ಚೆ ನಡೆಸಿದ್ದಾರೆ.
ಅಲ್ಲದೇ ಕ್ರಿಶ್ಚಿಯಾನೊ ಆರ್ ಅಮೊನ್ ಅವರು ಭಾರತದಲ್ಲಿ 5ಜಿ ಮತ್ತು ಡಿಜಿಟಲ್ ಇಂಡಿಯಾ ಜೊತೆಗೆ ಕೆಲಸ ಮಾಡಲು ಉತ್ಸುಕರಾಗಿದ್ದಾಗಿ ತಿಳಿಸಿದ್ದಾರೆ ಎನ್ನಲಾಗಿದೆ.
ಭೇಟಿ ನಂತರ ಪ್ರತಿಕ್ರಿಯೆ ನೀಡಿದ ಕ್ರಿಶ್ಚಿಯಾನೊ ಆರ್ ಅಮೊನ್, ಇದೊಂದು ಅದ್ಭುತ ಭೇಟಿ. ನಾವು ಭಾರತದ ಜೊತೆಗೆ ಸಹಭಾಗಿತ್ವ ವಹಿಸಲು ಹೆಮ್ಮೆ ಇದೆ. ನಾವು ಭೇಟಿಯಲ್ಲಿ 5ಜಿ ಬಗ್ಗೆ ಚರ್ಚೆ ನಡೆಸಿದ್ದೇವೆ. ಭಾರತದಲ್ಲಿ ಬಂಡವಾಳ ಹೂಡಿಕೆ ಬಗ್ಗೆ ಮಾತುಕತೆ ನಡೆಸಿದೆವು ಎಂದಿದ್ದಾರೆ.