ಪಾಕಿಸ್ತಾನ : ದಕ್ಷಿಣ ಪಾಕಿಸ್ತಾನದಲ್ಲಿ ಇಂದು ಮುಂಜಾನೆ ಪ್ರಬಲ ಭೂಕಂಪ ಸಂಭವಿಸಿದ್ದು, 20 ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ.
ರಿಕ್ಟರ್ ಮಾಪಕದಲ್ಲಿ 5.7 ತೀವ್ರತೆಯ ಭೂಕಂಪ ದಾಖಲಾಗಿದೆ.
ಮುಂಜಾನೆ 3:30ಕ್ಕೆ ಭೂಕಂಪ ಸಂಭವಿಸಿದ್ದು, ಒಬ್ಬ ಮಹಿಳೆ, ಆರು ಮಕ್ಕಳು ಸೇರಿ 20 ಮಂದಿ ಮೃತಪಟ್ಟಿದ್ದಾರೆ. 200ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಮನೆಗಳ ಛಾವಣಿ ಕುಸಿದು ಹೆಚ್ಚಿನ ಮಂದಿ ಮೃತಪಟ್ಟಿದ್ದಾರೆ. ರಕ್ಷಣಾ ಪಡೆಗಳು ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಕಾರ್ಯ ನಡೆಯುತ್ತಿದೆ ಎಂದು ಪಾಕಿಸ್ತಾನದ ಪ್ರಾಂತೀಯ ಆಂತರಿಕ ಸಚಿವ ಮೀರ್ ಜಿಯಾ ಉಲ್ಲಾ ಲಂಗೌ ತಿಳಿಸಿದ್ದಾರೆ.
ಬಲೂಚಿಸ್ತಾನದ ದೂರದ ಪರ್ವತ ನಗರ ಹರ್ನೈ ಅತಿಯಾಗಿ ಹಾನಿಗೊಳಗಾಗಿದ್ದು, ಇಲ್ಲಿ ಕರೆಂಟ್ ಹಾಗೂ ನೆಟ್ವರ್ಕ್ ಸಮಸ್ಯೆ ಇದ್ದು, ಮೊಬೈಲ್ ಬ್ಯಾಟರಿಗಳನ್ನು ಬಳಸಲಾಗುತ್ತಿದೆ.