ಬೆಂಗಳೂರು: ಡ್ರಗ್ಸ್ ಮಾಫಿಯಾಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಪೆಡ್ಲರ್ ಅನ್ನು ಸಿಸಿಬಿ ಬಂಧಿಸಿದೆ.
ನೈಜಿರಿಯಾದ ಬೆನಾಲ್ಡ್ ಉಡೇನ್ನಾ ಬಂಧಿತ ಆರೋಪಿ. ಆತನಿಂದ 12 ಗ್ರಾಂ ಕೊಕೇನ್, ಮೊಬೈಲ್ ಹಾಗೂ ಮೂರು ಮೊಬೈಲ್ ಸಿಮ್ಗಳನ್ನು ಸಿಸಿಬಿ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಪೇಜ್ ತ್ರಿ ಪಾರ್ಟಿಗಳಿಗೆ ಡ್ರಗ್ಸ್ ಪೂರೈಕೆಯಲ್ಲಿ ಬಹುಮುಖ್ಯ ಪೆಡ್ಲರ್ ಉಡೇನ್ನಾ ಆಗಿದ್ದಾನೆ. ತನಿಖೆಯಲ್ಲಿ ಲಭಿಸಿದ ಖಚಿತ ಮಾಹಿತಿ ಮೇರೆಗೆ ಆತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮಾದಕ ಮಾರಾಟ ಜಾಲದ ಪ್ರಕರಣದ ತನಿಖೆ ವೇಳೆ ಆಫ್ರಿಕಾ ಪ್ರಜೆಗಳು ಡ್ರಗ್ಸ್ ಪೂರೈಕೆಯಲ್ಲಿದ್ದಾರೆ ಎಂಬುದು ಗೊತ್ತಾಯಿತು. ಈ ಮಾಹಿತಿ ಮತ್ತಷ್ಟು ಶೋಧಿಸಿದಾಗ ಬಾಲ್ಡಿ, ಕೊಕೆ ಮತ್ತು ಜಾನ್ ಹೆಸರಿನಲ್ಲಿ ಬೆನಾಲ್ಟ್ ಒಬ್ಬಾತನೇ ದಂಧೆ ನಡೆಸುತ್ತಿರುವುದು ತಿಳಿಯಿತು ಎಂದಿದ್ದಾರೆ.