ಬೀಜಿಂಗ್: ಕೊರೋನಾ ವೈರಸ್ ಕೇವಲ ಒಂದು ಟ್ರೇಲರ್ ಮಾತ್ರ, ಇಂತಹ ಇನ್ನಷ್ಟು ವೈರಸ್ ಗಳು ಅಪಾಯವನ್ನು ಉಂಟು ಮಾಡುವ ಸಾಧ್ಯತೆಗಳು ಇವೆ ಎಂದು ಚೀನಾದ ಬಾವಲಿ ಮಹಿಳೆ ಶಿ ಝೆಂಗ್ಲಿ ತಿಳಿಸಿರುವರು.
ಸರಿಯಾದ ರೀತಿಯಲ್ಲಿ ವೈರಸ್ ಬಗ್ಗೆ ಅಧ್ಯಯನ ಮಾಡದೆ ಇದ್ದರೆ ಇಂತಹ ಸಾಂಕ್ರಾಮಿಕ ವೈರಸ್ ಗಳು ಹುಟ್ಟಿಕೊಳ್ಳುವುದು ಖಚಿತ ಎಂದು ಅವರು ಎಚ್ಚರಿಸಿರುವರು.
ಈಗ ಪತ್ತೆಯಾಗಿರುವ ವೈರಸ್ ಕೇವಲ ಒಂದು ಟ್ರೇಲರ್, ಇದರ ಸಿನಿಮಾ ಇನ್ನು ಬಾಕಿ ಇದೆ. ಅಂತಾರಾಷ್ಟ್ರೀಯ ಸಮುದಾಯದ ಸಹಕಾರದೊಂದಿಗೆ ವೈರಸ್ ವಿರುದ್ಧ ಹೋರಾಡಬೇಕಾಗಿದೆ ಎಂದು ಅವರು ಸುದ್ದಿವಾಹಿನಿಗೆ ನೀಡಿರುವಂತಹ ಸಂದರ್ಶನದಲ್ಲಿ ತಿಳಿಸಿದರು.
ವುಹಾನ್ ನ ವೈರಾಣು ಪ್ರಯೋಗಾಲಯದ ಉಪನಿರ್ದೇಶಕರು ಆಗಿರುವ ಶಿ ಝೆಂಗ್ಲಿ ಅವರು, ವಿಜ್ಞಾನ ಮತ್ತು ರಾಜಕೀಯ ಬೆರೆಸುವುದು ಸರಿಯಲ್ಲ ಎಂದು ಹೇಳಿದ್ದಾರೆ.
ವನ್ಯ ಜೀವಿಗಳಲ್ಲಿ ಇರುವ ಅಪರಿಚಿತ ವೈರಸ್ ಗಳ ಬಗ್ಗೆ ಸಂಶೋಧನೆ ಈಗಲೇ ಮಾಡಬೇಕಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ಇಂತಹ ಸಾಂಕ್ರಾಮಿಕ ರೋಗಗಳು ಹಬ್ಬುವುದನ್ನು ತಡೆಯಬಹುದು. ಸೂಕ್ತ ಅಧ್ಯಯನ ಮಾಡದೆ ಇದ್ದರೆ ಆಗ ಇಂತಹ ಸಾಂಕ್ರಾಮಿಕ ವೈರಸ್ ಗಳು ಕಾಡುವುದು ನಿಶ್ಚಿತ ಎಂದು ತಿಳಿಸಿದ್ದಾರೆ.
ಚೀನಾದ ವುಹಾನ್ ಪ್ರಯೋಗಾಲಯದಿಂದಲೇ ಕೊರೋನಾ ವೈರಸ್ ಹಬ್ಬಿದೆ ಎಂದು ಅಮೆರಿಕಾವು ಆರೋಪ ಮಾಡಿದೆ. ಆದರೆ ಚೀನಾ ಇದನ್ನು ತಿರಸ್ಕರಿಸುತ್ತಲೇ ಬಂದಿದೆ.