ಪಟ್ನಾ: ನಳಂದಾದಲ್ಲಿದ್ದ ಅಕ್ರಮ ಪಟಾಕಿ ಕಾರ್ಖಾನೆಯಲ್ಲಿ ಸಂಭವಿಸಿದ ಸ್ಫೋಟ ಪರಿಣಾಮ ಐದು ಮಂದಿ ದುರ್ಮರಣವನ್ನಪ್ಪಿದರೆ, 25ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಶುಕ್ರವಾರ ಬೆಳಗಿನ ಜಾವ ಈ ಘಟನೆ ನಡೆದಿದ್ದು, ಗಾಯಾಳುಗಳಲ್ಲಿ 17 ಮಂದಿಯ ಸ್ಥಿತಿ ಗಂಭೀರವಾಗಿದೆ ಎಂದು ವರದಿಗಳು ಹೇಳಿವೆ.
ಮಾಹಿತಿ ತಿಳಿದ ಅಗ್ನಿಶಾಮಕ ದಳದವರು ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ ಮತ್ತು ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಪೊಲೀಸರು ಕೂಡ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದಾರೆ.
ಇದುವರೆಗೆ ಸ್ಫೋಟಕ್ಕೆ ಸೂಕ್ತ ಕಾರಣ ತಿಳಿದುಬಂದಿಲ್ಲ. ಇಲ್ಲಿ ಪಟಾಕಿ ತಯಾರಿಸಲಾಗುತ್ತಿತ್ತೇ? ಅಥವಾ ಸ್ಫೋಟಕ ತಯಾರಿಸಲಾಗುತ್ತಿತ್ತೇ ಎನ್ನುವ ಬಗ್ಗೆ ಇನ್ನಷ್ಟೇ ಮಾಹಿತಿ ಬರಬೇಕಾಗಿದೆ.
ನಳಂದಾ ಜಿಲ್ಲಾಧಿಕಾರಿ ಹಾಗೂ ಎಸ್ ಪಿ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳನ್ನು ಭೇಟಿ ಮಾಡಿದ್ದಾರೆ. ಸ್ಥಳಕ್ಕೆ ಎನ್ ಐಎ ತಂಡ ಕೂಡ ಭೇಟಿ ನೀಡಿ ತನಿಖೆ ನಡೆಸಿದೆ.