ಉತ್ತರ ಕನ್ನಡ : ಗೋಕರ್ಣದ ಸುತ್ತಮುತ್ತ ಅಕ್ರಮ ರೆಸಾರ್ಟ್ ಹಾವಳಿ ಹೆಚ್ಚಾಗಿದೆ. ಉತ್ತರ ಕನ್ನಡದ ಗೋಕರ್ಣ ಸಮೀಪ ದುಬ್ಬನಸಶಿ ಗ್ರಾಮದಲ್ಲಿ ಕರಾವಳಿ ನಿಯಂತ್ರಣ ವಲಯ ರೂಲ್ಸ್ ಉಲ್ಲಂಘಿಸಿದ 44 ಅನಧಿಕೃತ ರೆಸಾರ್ಟ್‌ಗಳನ್ನು ತೆರವುಗೊಳಿಸಲು ಕುಮಟಾ ತಹಶೀಲ್ದಾರ್ ಆದೇಶಿಸಿದ್ದಾರೆ.

ದುಬ್ಬನಸಶಿ ಗ್ರಾಮದಲ್ಲಿ ಕರಾವಳಿ ನಿಯಂತ್ರಣ ವಲಯ ನಿಯಮ ಉಲ್ಲಂಘಿಸಿ ಅನಧಿಕೃತವಾಗಿ ನಿರ್ಮಿಸಲಾದ ರೆಸಾರ್ಟ್‌ಗಳ ವಿರುದ್ಧ ತಾಲೂಕು ಆಡಳಿತ ಕಠಿಣ ಕ್ರಮ ಕೈಗೊಂಡಿದ್ದು, ಕುಮಟಾ ತಹಶೀಲ್ದಾರ್ ಶ್ರೀಕೃಷ್ಣ ಒಟ್ಟು 44 ಅನಧಿಕೃತ ರೆಸಾರ್ಟ್‌ಗಳನ್ನು ತೆರವುಗೊಳಿಸಲು ಆದೇಶ ನೀಡಿದ್ದಾರೆ. ಈ ರೆಸಾರ್ಟ್‌ಗಳು ದುಬ್ಬನಸಶಿ, ನಡುಮಸ್ಕೇರಿ ಸೇರಿದಂತೆ ಅರಬ್ಬಿ ಸಮುದ್ರ ತೀರದ ಭಾಗಗಳಲ್ಲಿ ನಿರ್ಮಾಣಗೊಂಡಿವೆ.

44 ರೆಸಾರ್ಟ್‌ಗಳ ಪೈಕಿ 16 ರೆಸಾರ್ಟ್ ಮಾಲೀಕರು ಹೈಕೋರ್ಟ್‌ನಿಂದ ತಡೆಯಾಜ್ಞೆ ಪಡೆದಿದ್ದಾರೆ. ಈ ಕಾರಣದಿಂದಾಗಿ ಆ ರೆಸಾರ್ಟ್‌ಗಳನ್ನು ಈಗಿನ ಪರಿಸ್ಥಿತಿಯಲ್ಲಿ ತೆರವುಗೊಳಿಸಲಾಗುವುದಿಲ್ಲ ಎನ್ನಲಾಗಿದೆ. 7 ರೆಸಾರ್ಟ್‌ಗಳನ್ನು ಮಾಲೀಕರು ಸ್ವಯಂ ಪ್ರೇರಿತವಾಗಿ ತೆರವು ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಉಳಿದ 21 ರೆಸಾರ್ಟ್‌ಗಳನ್ನು ತಾಲೂಕು ಆಡಳಿತ ಸೀಜ್ ಮಾಡಿ, ನಿಯಮಾನುಸಾರವಾಗಿ ತೆರವುಗೊಳಿಸುವ ಕ್ರಮ ಕೈಗೊಳ್ಳಲಿದೆ.