ಕಾರವಾರ: ಶಿರೂರು ಗುಡ್ಡ ಕುಸಿತ ಘಟನೆ ಸಂಭವಿಸಿ ಎರಡು ತಿಂಗಳು ಕಳೆದರೂ ಇನ್ನೂ ಕೂಡಾ ನಾಪತ್ತೆಯಾದವರ ಶವಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಇಂದು ಕಾರ್ಯಾಚರಣೆ ವೇಳೆ ಗಂಗಾವಳಿ ನದಿಯಲ್ಲಿ ಎರಡು ಮಾನವ ದೇಹದ ಮೂಳೆಗಳು ಪತ್ತೆಯಾಗಿವೆ.
ಕೆಲ ದಿನಗಳ ಹಿಂದಷ್ಟೇ ಕೇರಳದ ಲಾರಿ ಚಾಲಕ ಅರ್ಜುನನ ಶವ ನದಿಯಲ್ಲಿ ಮುಳುಗಡೆಯಾಗಿದ್ದ ಲಾರಿಯೊಳಗೆ ಪತ್ತೆಯಾಗಿತ್ತು. ಬಳಿಕ ಶಿರೂರಿನ ಜಗನ್ನಾಥ್ ಹಾಗೂ ಗಂಗೆಕೊಳ್ಳದ ಲೋಕೇಶ್ ಶವಗಳಿಗಾಗಿ ಶೋಧ ಮುಂದುವರಿಸಿದ ಸಂದರ್ಭ ಎರಡು ಮಾನವ ದೇಹದ ಮೂಳೆಗಳು ಪತ್ತೆಯಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಉತ್ತರ ಕನ್ನಡ ಜಿಲ್ಲಾಧಿಕಾರಿ ಲಕ್ಷ್ಮಿ ಪ್ರಿಯಾ, ಶೋಧ ಕಾರ್ಯಾಚರಣೆ ವೇಳೆ ನದಿಯಲ್ಲಿ ಮಾನವನ ಮೂಳೆ ಪತ್ತೆ ಆಗಿದೆ. ಪತ್ತೆಯಾದ ಎರಡು ಮೂಳೆಗಳನ್ನು ಡಿಎನ್ಎ ಟೆಸ್ಟ್ಗೆ ಕಳುಹಿಸಿದ್ದೇವೆ. ಡಿಎನ್ಎ ಟೆಸ್ಟ್ ಬಳಿಕ ಸಂಬಂಧಪಟ್ಟ ಕುಟುಂಬಕ್ಕೆ ಹಸ್ತಾಂತರ ಮಾಡಲಾಗುವುದು ಎಂದಿದ್ದಾರೆ.

