ಕಾರವಾರ: ದೂದ್ ಸಾಗರ ಹಾಗೂ ಸೋನಾಲಿಂ ಮಾರ್ಗ ಮಧ್ಯೆ ಗೂಡ್ಸ್ ರೈಲು ಹಳಿ ತಪ್ಪಿದ ಪರಿಣಾಮ ಬೆಳಗಾವಿ ಹುಬ್ಬಳ್ಳಿ ಮಾರ್ಗದಲ್ಲಿ ರೈಲು ಸಂಚಾರದಲ್ಲಿ ತುಸು ವ್ಯತ್ಯಯವಾಗಿದೆ. ಗೋವಾದ ವಾಸ್ಕೋದಿಂದ ಹೊಸಪೇಟೆಗೆ ತೆರಳುತ್ತಿದ್ದ ಗೂಡ್ಸ್ ರೈಲು ಹಳಿ ತಪ್ಪಿದ್ದರಿಂದ 11 ಬೋಗಿಗಳು ನೆಲಕ್ಕುರುಳಿ ಕಲ್ಲಿದ್ದಲು ವ್ಯರ್ಥವಾಗಿದೆ. ಗೋವಾದ ವಾಸ್ಕೋದಿಂದ ಹೊಸಪೇಟೆ ಬಳಿಯ ಜಿಂದಲ್ ಕಂಪನಿಗೆ ಕಲ್ಲಿದ್ದಲು ಕೊಂಡೊಯ್ಯುತಿದ್ದ ರೈಲು ಇದಾಗಿದೆ.
ಅದೃಷ್ಟವಶಾತ್, ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಸದ್ಯ ಬೆಳಗಾವಿ, ಹುಬ್ಬಳ್ಳಿ ಮಾರ್ಗದ ರೈಲು ಸಂಚಾರ ಸಮಯ ಬದಲಾಗಿದೆ. ಗೋವಾ ಮೂಲಕ ಸಂಚರಿಸುವ ಎರಡು ಟ್ರೈನ್ಗಳ ಸಂಚಾರ ಬಂದ್ ಆಗಿದೆ.
ಗೂಡ್ಸ್ ರೈಲು ಹಳಿತಪ್ಪಿದೆ ಬಗ್ಗೆ ನೈಋತ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಮಂಜುನಾಥ್ ಕನಮಡಿ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿದ್ದು, ರೈಲು ಸಂಖ್ಯೆ 17420/17022 ವಾಸ್ಕೋಡಗಾಮಾ-ತಿರುಪತಿ/ಹೈದರಾಬಾದ್ ವೀಕ್ಲಿ ಎಕ್ಸ್‌ಪ್ರೆಸ್ ಸೇರಿದಂತೆ ಮೂರು ರೈಲುಗಳ ಮಾರ್ಗ ಬದಲಾಯಿಸಲಾಗಿದೆ ಎಂದು ತಿಳಿಸಿದ್ದಾರೆ.

