ಉತ್ತರ ಕನ್ನಡ: ಅಂಕೋಲಾ ಶಿರೂರು ಗುಡ್ಡ ಕುಸಿತ ಪ್ರಕರಣಕ್ಕೆ ಇದುವರೆಗೆ ಶಿರೂರು ಮೂಲದ ಒಂದೇ ಕುಟುಂಬದ ನಾಲ್ವರು, ಇಬ್ಬರು ಚಾಲಕರು ಸೇರಿ 6 ಮಂದಿ ಮೃತದೇಹ ಪತ್ತೆಯಾಗಿದೆ. ಮೊದಲ ದಿನ ಶಾಂತಿ ಲಕ್ಷ್ಮಣ ನಾಯ್ಕ(36) ಎಂಬುವವರ ಶವ ಪತ್ತೆಯಾಗಿತ್ತು. 2ನೇ ದಿನ ಲಕ್ಷ್ಮಣ ನಾಯ್ಕ (47), ರೋಶನ್ ಲಕ್ಷಣ ನಾಯ್ಕ(11) ಹಾಗೂ ತಮಿಳುನಾಡು ಮೂಲದ ಟ್ಯಾಂಕರ್ ಚಾಲಕ ಚಿಣ್ಣನ್‌ (55) ಎಂಬುವವರ ಮೃತದೇಹ ಪತ್ತೆಯಾಗಿದೆ.ಗುರುವಾರ ಅವಂತಿಕಾ ಲಕ್ಷ್ಮಣ ನಾಯ್ಕ(5), ಲಾರಿ ಚಾಲಕ ಮುರುಗನ್ ಶವ ಸಿಕ್ಕಿದೆ. ಹೀಗಾಗಿ ಒಟ್ಟು ಸಾವಿನ ಸಂಖ್ಯೆ 10ಕ್ಕೆ ಏರುವ ಸಾಧ್ಯತೆಯೂ ಇದೆ.

ಅಂಕೋಲಾದ ಶಿರೂರು ಗುಡ್ಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿಯಿಂದ ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ ತಂಡ ಭೇಟಿ ನೀಡಿದೆ. ಗುಡ್ಡ ಕುಸಿತ ಸ್ಥಳದಲ್ಲಿ ಕಲ್ಲು, ಮಣ್ಣು ಪರಿಶೀಲನೆ ನಡೆಸಿದ್ದಾರೆ. ಈ ಹಿಂದೆ ಜಿಲ್ಲೆಯಲ್ಲಿ ಸರ್ವೆ ನಡೆಸಿ ಭೂಕುಸಿತ ಅಪಾಯವಿರುವ ಸ್ಥಳಗಳನ್ನು ಗುರುತಿಸಿತ್ತು. ಜಿಲ್ಲೆಯ ಸುಮಾರು 436 ಕಡೆ ಭೂಕುಸಿತ ಉಂಟಾಗುವ ಎಚ್ಚರಿಕೆಯನ್ನು ಜಿಯೊಲಾಜಿಕಲ್ ಸರ್ವೆ ಆಫ್ ಇಂಡಿಯಾ ನೀಡಿತ್ತು. ಇದೀಗ ಎನ್‌ಎಚ್‌ಎಐ (NHAI) ಅಧಿಕಾರಿಗಳೊಂದಿಗೆ ಗುಡ್ಡ ಕುಸಿತ ಸ್ಥಳ ಪರಿಶೀಲನೆ ನಡೆಸಿದ್ದಾರೆ.