ಉತ್ತರ ಕನ್ನಡ: ಮೀನುಗಾರರನ್ನ ಕಡಲ ಮಕ್ಕಳು ಎಂದೇ ಕರೆಯುತ್ತಾರೆ. ಪ್ರತಿ ದಿನ ಆಳ ಸಮುದ್ರಕ್ಕೆ ಇಳಿದು ಮೀನಿನ ಶಿಕಾರಿ ಮಾಡಿಕೊಂಡು ಬಂದು ತಮ್ಮ ಹೊಟ್ಟೆಯನ್ನ ತುಂಬಿಸಿಕೊಳ್ಳುವ ಕಾಯಕವನ್ನ ವರ್ಷ ಪೂರ್ತಿ ಮಾಡುತ್ತಾರೆ. ಆದರೆ, ಜೂನ್ ಮತ್ತು ಜುಲೈ ತಿಂಗಳು ಮಾತ್ರ ಮೀನುಗಾರರಿಗೆ ತಮ್ಮ ಜೀವವನ್ನು ಪಣಕ್ಕೆ ಇಡಬೇಕಾಗುತ್ತದೆ.
ಸರ್ಕಾರ ಜೂನ್ ಮತ್ತು ಜುಲೈ ತಿಂಗಳಿನಲ್ಲಿ ಮಳೆಗಾಲ ಆಗಿರುವುದರಿಂದ ಜೊತೆಗೆ ಮೀನು ಮೊಟ್ಟೆ ಇಟ್ಟು ಸಂತತಿ ವೃದ್ದಿ ಮಾಡುವ ಸಮಯವಾದರಿಂದ ಮೀನುಗಾರಿಕೆ ಮೇಲೆ ನಿಷೇದ ಹೇರಿರುತ್ತದೆ.
ಈ ಎರಡು ತಿಂಗಳುಗಳ ಕಾಲ ಯಾವುದೇ ಕಾರಣಕ್ಕೂ ಮೀನುಗಾರರು ಕಡಲಿಗೆ ಮೀನುಗಾರಿಕೆ ಮಾಡಲು ಇಳಿಯುವಂತಿಲ್ಲ. ಈ ನಿಟ್ಟಿನಲ್ಲಿ ನಾಳೆಯಿಂದ ಮೀನುಗಾರಿಕೆ ನಿಷೇಧ ಪ್ರಾರಂಭವಾಗುವುದರಿಂದ, ಕಡಲ ನಗರಿ ಕಾರವಾರದ ಬೈತಕೋಲ ಬಂದರಿನಲ್ಲಿ ಮೀನುಗಾರರು ಈ ವರ್ಷದ ತಮ್ಮ ಕಾಯಕವನ್ನ ಇಂದು ನಿಲ್ಲಿಸಿದರು.
ಬಂದರಿಗೆ ನೂರಾರು ಮೀನುಗಾರರು ವಾಪಾಸ್ ಬೋಟ್ಗಳನ್ನ ತಂದು ಲಂಗರು ಹಾಕಿ ನಿಲ್ಲಿಸಿದ್ದು, ಮೀನುಗಾರರು ಯಾವುದೇ ಕಾರಣಕ್ಕೂ ನಾಳೆಯಿಂದ ಕಡಲಿಗೆ ಇಳಿಯದಂತೆ ಮೀನುಗಾರಿಕೆ ಇಲಾಖೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

