ಭಟ್ಕಳ: ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಉರುಳಿಬಿದ್ದ ಪರಿಣಾಮ ಆರು ವರ್ಷದ ಬಾಲಕ ಸ್ಥಳದಲ್ಲೇ ಮೃತಪಟ್ಟು, ನಾಲ್ವರು ಗಾಯಗೊಂಡ ಘಟನೆ ಸಿರ್ಸಿ ಸಮೀಪದ ಸಿರ್ಸಿಮಕ್ಕಿ ಬಳಿ ಶನಿವಾರ ನಡೆದಿದೆ.
ಮೃತ ಬಾಲಕನನ್ನು ಸಿರ್ಸಿಯ ಕಸ್ತೂರುಬಾ ನಗರದ ನಿವಾಸಿ ಮುಹಮ್ಮದ್ ಅಲಿ ಸೌದಾಗರ್ ಎಂಬವರ ಪುತ್ರ ಅಮಾನುಲ್ಲಾ ಸೌದಾಗರ್ ಎಂದು ಗುರುತಿಸಲಾಗಿದೆ. ಮುಹಮ್ಮದ್ ಅಲಿ ಪತ್ನಿ, ಪುತ್ರ ಸೇರಿದಂತೆ ಐವರು ಕುಟುಂಬಸ್ಥರೊಂದಿಗೆ ಪ್ರಯಾಣಿಸುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ.
ಗಾಯಗೊಂಡವರಲ್ಲಿ ಮುಹಮ್ಮದ್ ಅಲಿ ಸೌದಾಗರ್ ಹಾಗೂ ತಾಯಿ ಶಿರಿನ್ ಬಾನು ಸೇರಿದ್ದು, ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಶಿಕ್ಷಕ ದಂಪತಿಯಾಗಿರುವ ಮುಹಮ್ಮದ್ ಅಲಿ ಮತ್ತು ಶಿರಿನ್ ಬಾನು ಅವರು ಶಾಲಾ ರಜೆಯ ಹಿನ್ನೆಲೆಯಲ್ಲಿ ಕುಟುಂಬ ಸಮೇತ ಶಿರೂರಿನಿಂದ ಸಿರ್ಸಿಗೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಅಫಘಾತದ ಬಗ್ಗೆ ಸಿರ್ಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

