ಉತ್ತರ ಕನ್ನಡ : ಖಾಸಗಿ ಲಕ್ಸುರಿ ಬಸ್ ಚಾಲಕನ ನಿಯಂತ್ರಣ ತಪ್ಪಿ ರಾಷ್ಟ್ರೀಯ ಹೆದ್ದಾರಿ 52ರ ಕಂಚಿನಬಾಗಿಲು ಬಳಿ ರಸ್ತೆಗೆ ಅಡ್ಡಲಾಗಿ ಪಲ್ಟಿಯಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನಲ್ಲಿ ಇಂದು (ಶನಿವಾರ) ಬೆಳಗಿನ ಜಾವ ಭೀಕರ ರಸ್ತೆ ಅಪಘಾತ ಸಂಭವಿಸಿದೆ.
ಈ ಭೀಕರ ದುರಂತದಲ್ಲಿ ಓರ್ವ ಪ್ರಯಾಣಿಕ ಸ್ಥಳದಲ್ಲೇ ದುರ್ಮರಣಕ್ಕೀಡಾಗಿದ್ದು, ಬಸ್ಸಿನಲ್ಲಿದ್ದ ಒಟ್ಟು 36 ಪ್ರಯಾಣಿಕರ ಪೈಕಿ 21 ಜನರು ತೀವ್ರವಾಗಿ ಗಾಯಗೊಂಡಿದ್ದಾರೆ. ಬೆಳಗಿನ ಜಾವ ಚಾಲಕನಿಗೆ ನಿದ್ರೆ ತೂಕಡಿಸಿದ ಕಾರಣ ಬಸ್ ನಿಯಂತ್ರಣ ತಪ್ಪಿರಬಹುದು ಎಂದು ಶಂಕಿಸಲಾಗಿದೆ.
ವೇಗವಾಗಿ ಬಂದ ಬಸ್ ಹೆದ್ದಾರಿಯ ಮಧ್ಯದಲ್ಲೇ ಉರುಳಿಬಿದ್ದ ಪರಿಣಾಮ, ಹೆದ್ದಾರಿಯ ಎರಡೂ ಬದಿಗಳಲ್ಲಿ ನೂರಾರು ವಾಹನಗಳು ಸಾಲುಗಟ್ಟಿ ನಿಂತು ಭಾರಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಕತ್ತಲೆಯಲ್ಲಿ ಪ್ರಯಾಣಿಕರ ಕಿರುಚಾಟ ಕೇಳಿ ಸ್ಥಳೀಯರು ಆತಂಕಗೊಂಡಿದ್ದರು.
ಘಟನೆ ನಡೆದ ತಕ್ಷಣವೇ ಅಂಕೋಲಾ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಭರದಿಂದ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಪೊಲೀಸರು ಮತ್ತು ಸ್ಥಳೀಯರು ಸೇರಿ ಬಸ್ಸಿನ ಕಿಟಕಿ ಗಾಜುಗಳನ್ನು ಒಡೆದು ಒಳಗಿದ್ದ ಪ್ರಯಾಣಿಕರನ್ನು ಹೊರತರಲು ಹರಸಾಹಸ ಪಟ್ಟರು.
ಗಾಯಗೊಂಡ 21 ಜನರನ್ನು ತಕ್ಷಣವೇ ಅಂಕೋಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಲಾಗಿದೆ. ಅವರಲ್ಲಿ ತಲೆ ಮತ್ತು ಎದೆಗೆ ಬಲವಾದ ಪೆಟ್ಟು ಬಿದ್ದು ಪರಿಸ್ಥಿತಿ ಗಂಭೀರವಾಗಿದ್ದ 9 ಮಂದಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಕಾರವಾರದ ಕ್ರಿಮ್ಸ್ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ.
ಅಪಘಾತದ ಬಳಿಕ ಪೊಲೀಸರು ಸ್ಥಳಕ್ಕೆ ಬೃಹತ್ ಕ್ರೇನ್ ತರಿಸಿ, ಹೆದ್ದಾರಿ ಮೇಲಿಂದ ಉರುಳಿಬಿದ್ದಿದ್ದ ಸೀಬರ್ಡ್ ಬಸ್ಸನ್ನು ಪಕ್ಕಕ್ಕೆ ಎತ್ತಿ ತೆರವುಗೊಳಿಸಿದರು. ಪ್ರಸ್ತುತ ಹೆದ್ದಾರಿಯ ಎರಡು ಬದಿಗಳಲ್ಲೂ ವಾಹನ ಸಂಚಾರವನ್ನು ಸುಗಮಗೊಳಿಸಲಾಗಿದ್ದು, ಈ ಭೀಕರ ಅಪಘಾತದ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

