ಉಡುಪಿ: ರಸ್ತೆ ಇಲ್ಲದೆ ಅನಾರೋಗ್ಯ ವೃದ್ದೆಯನ್ನು ಆಸ್ಪತ್ರೆಗೆ ದಾಖಲಿಸಲು ಯುವಕರು ಹರಸಾಹಸ ಪಟ್ಟ ಘಟನೆ ಬೈಂದೂರು ತಾಲೂಕಿನ ಮರವಂತೆ ಗ್ರಾಮದಲ್ಲಿ ನಡೆದಿದೆ.
ಅನಾರೋಗ್ಯ ಪೀಡಿತ ವೃದ್ದೆಯನ್ನು ಹೊತ್ತುಕೊಂಡು ಗದ್ದೆಯ ಬದು ಮೇಲೆ ಯುವಕರು ಸಾಗಿದರು. ನಿವೃತ್ತ ಅಂಗನವಾಡಿ ಶಿಕ್ಷಕಿ ಶ್ರೀಮತಿ ಸರೋಜಾ ಅವರ ತಾಯಿ ಭಾಗಿಗೆ ತೀವ್ರ ಅನಾರೋಗ್ಯ ಸಂಭವಿಸಿತ್ತು.
ಅನಾರೋಗ್ಯಕ್ಕೆ ಚಿಕಿತ್ಸೆ ನೀಡಲು ಆಸ್ಪತ್ರೆಗೆ ತೆರಳಲು ಸರಿಯಾದ ರಸ್ತೆಯಿಲ್ಲ, ರಸ್ತೆಯಿಲ್ಲದೆ ಸಮಸ್ಯೆ ಎದುರಿಸುತ್ತಿದ್ದ ಅಂಗನವಾಡಿ ಶಿಕ್ಷಕಿಯ ನೆರವಿಗೆ ಯುವಕರು ಬಂದರು. ಸಂಗಮ ಯುವಕ ಮಂಡಲದ ಪದಾಧಿಕಾರಿಗಳಿಂದ ಅನಾರೋಗ್ಯ ಪೀಡಿತ ವೃದ್ಧೆಗೆ ನೆರವು ನೀಡಲಾಯಿತು.
ಅನಾರೋಗ್ಯ ಪೀಡಿತೆಯನ್ನು ಹೊತ್ತುಕೊಂಡು ಯುವಕ ಮಂಡಲದ ಕಿಶನ್ ಪೂಜಾರಿ ಹಾಗೂ ರಾಘವೇಂದ್ರ ದೇವಾಡಿಗ ಸಾಗಿದರು. ಅಗಲ ಕಿರಿದಾಗಿರುವ ಗದ್ದೆಯ ಮೇಲೆ ವಯೋವೃದ್ದೆಯನ್ನು ಯುವಕರು ಹೊತ್ತು ತಂದರು. ಬಳಿಕ ಬೈಂದೂರು ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಯಿತು. ಯುವಕರ ಈ ಸಾಮಾಜಿಕ ಕಳಕಳಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರಿಂದ ಬಾರಿ ಮೆಚ್ಚುಗೆ ವ್ಯಕ್ತವಾಗಿದೆ.

