ಉಡುಪಿ: ಚಲಿಸುತ್ತಿದ್ದ ರೈಲಿನಿಂದ ಹೊರ ಜಿಗಿಯಲು ಯತ್ನಿಸುತ್ತಿದ್ದ ಯುವಕನೋರ್ವ ತಪಾಸಣಾಧಿಕಾರಿಯ ಸಮಯಪ್ರಜ್ಞೆಯಿಂದ ಬದುಕುಲಿದ ಘಟನೆ ಉಡುಪಿಯ ಇನ್ನಂಜೆಯಲ್ಲಿ ನಡೆದಿದೆ.
ಕೊಯಿಕೊಡ್ ನಿವಾಸಿ ಸಹಾದ್ (25) ರಕ್ಷಿಸಲ್ಪಟ್ಟ ಯುವಕ. ಈತ ಟಿಕೆಟ್ ಇಲ್ಲದೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದು, ತಪಾಸಣಾಧಿಕಾರಿಯನ್ನು ಕಂಡು ರೈಲಿನಿಂದ ಜಿಗಿಯಲು ಯತ್ನಿಸಿದ್ದಾನೆ. ಈ ವೇಳೆ ತಪಾಸಣಾಧಿಕಾರಿ ಬಾಬು ಅವರು ಯುವಕನನ್ನು ರಕ್ಷಿಸುವ ಮೂಲಕ ಸಮಯಪ್ರಜ್ಞೆ ಮೆರೆದಿದ್ದಾರೆ.
ಕೇರಳದಿಂದ ಮುಂಬೈಗೆ ತೆರಳುತ್ತಿದ್ದ ರೈಲು ಇನ್ನಂಜೆ ರೈಲು ನಿಲ್ದಾಣದ ಸಮೀಪ ಬಂದಾಗ ಈ ಘಟನೆ ನಡೆದಿದೆ. ಬಳಿಕ ಬಾಬು ಅವರು ರಕ್ಷಿಸಿದ್ದ ಯುವಕನನ್ನು ಇಂದ್ರಾಳಿಯ ಆರ್ ಪಿ ಎಫ್ ಕಚೇರಿ ವಶಕ್ಕೆ ಒಪ್ಪಿಸಿದರು.
ಯುವಕ ಮನೋರೋಗಿ ಎಂದು ತಿಳಿದು ಬಂದಿರುವುದರಿಂದ ರೈಲ್ವೆ ಪೋಲಿಸರು ಸಮಾಜಸೇವಕ ನಿತ್ಯಾನಂದ ಒಳಕಾಡು ಅವರ ನೆರವು ಪಡೆದು, ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲುಪಡಿಸಲಾಗಿದೆ. ಕಾರ್ಯಾಚರಣೆಯಲ್ಲಿ ಟಿ.ಸಿ ಸುನೀಲ್, ಆರ್.ಪಿ.ಎಫ್ ರವಿಪ್ರಕಾಶ್, ಜೀನ ಪಿಂಟೋ ಭಾಗಿಯಾಗಿದ್ದರು

