ಉಡುಪಿ: ಕೇಂದ್ರ ಹಾಗೂ ರಾಜ್ಯ ಸರ್ಕಾರ ಜನತೆಯ ಮೇಲೆ ಮಿತಿಮೀರಿದ ಆರ್ಥಿಕ ಹೊರೆ ಹೇರುತ್ತಿರುವುದರ ವಿರುದ್ಧ ವಿಮೆನ್ ಇಂಡಿಯಾ ಮೂವ್ಮೆಂಟ್ ಉಡುಪಿ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಎ.26ರಂದು ಕಾಪುವಿನಲ್ಲಿ ಹಾಗೂ ಎ.28ರಂದು ಉಡುಪಿ ಡಿಸಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದೆ ಎಂದು ವಿಮೆನ್ ಇಂಡಿಯಾ ಮೂವ್ಮೆಂಟ್ ಉಡುಪಿ ಜಿಲ್ಲಾಧ್ಯಕ್ಷೆ ನಾಝಿಯಾ ನಸ್ರುಲ್ಲ ತಿಳಿಸಿದರು.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಈಗಾಗಲೇ ದಿನ ಬಳಕೆ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿರುವ ಜನತೆಗೆ ಅತ್ತ ಕೇಂದ್ರ ಬಿಜೆಪಿ ಸರ್ಕಾರ ಅಡುಗೆ ಅನಿಲ ದರವನ್ನು ಹೆಚ್ಚಿಸಿದರೆ, ಇತ್ತ ರಾಜ್ಯ ಕಾಂಗ್ರೆಸ್ ಸರ್ಕಾರ ವಿದ್ಯುತ್, ಹಾಲು, ನೀರು, ಬಸ್ ದರಗಳನ್ನು ಏರಿಸಿದೆ. ಇದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಅದರ ಜೊತೆಗೆ ಜನಸ್ನೇಹಿಯಾಗಿದ್ದ ನಮ್ಮ ಮೆಟ್ರೋ ರೈಲಿನ ದರ ಏರಿಕೆಯಿಂದ ಜನಸಾಮಾನ್ಯರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದರು.
ಜಾಗತಿಕವಾಗಿ ತೈಲ ಬೆಲೆಗಳು ಇಳಿಯುತ್ತಿದ್ದರೂ ಸಹ ತೈಲಗಳ ಮೇಲೆ ಅಬಕಾರಿ ಸುಂಕ ಹೆಚ್ಚಳ ಮಾಡುವ ಮೂಲಕ ಸರ್ಕಾರ ಹಗಲು ದರೋಡೆಗೆ ಇಳಿದಿದೆ. ಕಚ್ಚಾತೈಲಗಳ ಬೆಲೆ ಕುಸಿತದ ಲಾಭ ಜನ ಸಾಮಾನ್ಯರಿಗೆ ದೊರಕುತ್ತಿಲ್ಲ. ಬಡ, ಮಧ್ಯಮ ವರ್ಗಗಳಿಗೆ ಅಭಿವೃದ್ಧಿಯ ಭರವಸೆ ನೀಡಿ ಅಧಿಕಾರಕ್ಕೆ ಏರಿರುವ ಸರ್ಕಾರಗಳು ಜನರನ್ನು ಸಂಕಷ್ಟದ ಕೂಪಕ್ಕೆ ತಳ್ಳಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಒಂದು ಕಡೆ ಅಚ್ಛೇದಿನ್ ಹೆಸರಲ್ಲಿ ಕೇಂದ್ರ ಸರ್ಕಾರ, ಗ್ಯಾರಂಟಿ ಯೋಜನೆಗಳ ಮೂಲಕ ತಮ್ಮದು ಜನಪರ ಸರ್ಕಾರ ಎನ್ನುವ ರಾಜ್ಯ ಸರ್ಕಾರ ಎರಡೂ ಸೇರಿಕೊಂಡು ಬೆಲೆ ಏರಿಕೆಯಿಂದ ಜನರನ್ನೇ ಲೂಟಿ ಮಾಡುತ್ತಿವೆ. ಜನರ ಹಿತಾಸಕ್ತಿ ಕಾಪಾಡುವಲ್ಲಿ ಸಂಪೂರ್ಣ ಎಡುವಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜನ ವಿರೋಧಿ ನೀತಿಗಳ ವಿರುದ್ಧ ವಿಮೆನ್ ಇಂಡಿಯಾ ಮೂವ್ಮೆಂಟ್ ರಾಜ್ಯದಾದ್ಯಂತ ಪ್ರತಿಭಟನಾ ಅಭಿಯಾನ ಹಮ್ಮಿಕೊಂಡಿದೆ ಎಂದು ತಿಳಿಸಿದರು.

