ಕುಂದಾಪುರ: ಬೈಕ್‌ನಲ್ಲಿ ಬಂದ ವ್ಯಕ್ತಿಯೊಬ್ಬ ರಸ್ತೆಯಲ್ಲಿ ಸಾಗುತ್ತಿದ್ದ ಮಹಿಳೆಯ ಕರಿಮಣಿ ಸರ ಕಸಿದ ಘಟನೆ ಮಾ. 20ರಂದು ಯಡ್ತಾಡಿಯಲ್ಲಿ ನಡೆದಿತ್ತು. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಮಾ. 21ರಂದು ಆರೋಪಿಯನ್ನು ವಶಪಡಿಸಿಕೊಂಡಿದ್ದಾರೆ.

ಸಾಲಿಗ್ರಾಮ ಕಾರ್ಕಡ ಭಟ್ರಕಟ್ಟೆ ನಿವಾಸಿ ಮಂಜುನಾಥ ಮಯ್ಯ ಪೊಲೀಸರು ವಶಪಡಿಸಿಕೊಂಡ ಆರೋಪಿ. ಗುರುವಾರ ಯಡ್ತಾಡಿ ನಿವಾಸಿ ಸೀತಾ ಬಾಯಿ ಅವರು ಪಕ್ಕದ ಮನೆಯ ಕಾರ್ಯಕ್ರಮಕ್ಕೆಂದು ರಸ್ತೆಯಲ್ಲಿ ನಡೆದುಕೊಂಡು ತೆರಳುತ್ತಿದ್ದರು.

ಈ ವೇಳೆ ಅಲ್ತಾರು ಪಡುಮನೆ ಸಮೀಪ ಯಡ್ತಾಡಿ ಕಡೆಯಿಂದ ಬೈಕ್‌ನಲ್ಲಿ ಬಂದ ಆರೋಪಿ 28 ಗ್ರಾಂ ತೂಕದ ಚಿನ್ನದ ಕರಿಮಣಿ ಸರವನ್ನು ಕಿತ್ತುಕೊಂಡು ಮಂದಾರ್ತಿ ಕಡೆಗೆ ಪರಾರಿಯಾಗಿದ್ದ.

ಕೂಡಲೇ ಸ್ಥಳೀಯರು ಬ್ರಹ್ಮಾವರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಸುಮಾರು 20 ಕಿ.ಮೀ. ವ್ಯಾಪ್ತಿಯ ವಿವಿಧ ಕಡೆಗಳ ಸಿ.ಸಿ. ಕೆಮರಾಗಳನ್ನು ಪೊಲೀಸರು ಪರಿಶೀಲನೆ ನಡೆಸಿದ್ದು, ಆಗ ಬೈಕ್ ಬಗ್ಗೆ ಮಾಹಿತಿ ದೊರೆತಿದೆ. ಅದರ ಆಧಾರದಲ್ಲಿ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.