ಉಡುಪಿ: ಏಕಾಏಕಿ‌ ಬೀಸಿದ ಸುಂಟರಗಾಳಿಗೆ ಮರವೊಂದು ಬಿದ್ದ ಪರಿಣಾಮ ರಸ್ತೆ ಬದಿಯಲ್ಲಿ ಕಟ್ಟಿದ್ದ ದನ ಹಾಗೂ ಅದನ್ನು ಬಿಡಿಸಲು ಹೋಗಿದ್ದ ಮಹಿಳೆ ಸಾವನ್ನಪ್ಪಿದ ಘಟನೆ ಭಾನುವಾರ ಸಂಜೆ ಕುಂದಾಪುರ ತಾಲೂಕಿನ ಕೆಂಚನೂರು ಗ್ರಾಮದಲ್ಲಿ ನಡೆದಿದೆ.ಕೆಂಚನೂರು ಗ್ರಾಮದ ನೀರಿನ ಟ್ಯಾಂಕ್ ಬಳಿಯ ಮಲ್ಲಾರಿ ನಿವಾಸಿ ಅಣ್ಣಪ್ಪಯ್ಯ ಆಚಾರಿ ಎಂಬುವರ ಪತ್ನಿ ಸುಜಾತ ಆಚಾರ್ತಿ (53) ಮೃತ ದುರ್ದೈವಿ. ಸುಜಾತ ಭಾನುವಾರ ಸಂಜೆ 5.30 ಕ್ಕೆ ಭಾರೀ ಸುಂಟರಗಾಳಿ ಬೀಸಿದ ಕಾರಣದಿಂದ ಮನೆ ಸಮೀಪದ ರಸ್ತೆ ಬದಿಯಲ್ಲಿ ಮೇಯಲು ಕಟ್ಟಿದ್ದ ದನವನ್ನು ಬಿಡಿಸಿ ಕೊಟ್ಟಿಗೆಗೆ ತರಲೆಂದು ಹೋಗಿದ್ದರು.

ಈ ವೇಳೆ ಬೃಹತ್ ಮರವೊಂದು ಸುಜಾತ ಆಚಾರ್ತಿ ಹಾಗೂ ದನದ ಮೇಲೆ ಬಿದ್ದಿದೆ. ಇದರಿಂದ ದನ ಸ್ಥಳದಲ್ಲಿಯೇ ಸಾವನ್ನಪ್ಪಿದೆ. ಗಂಭೀರವಾಗಿ ಗಾಯಗೊಂಡಿದ್ದ ಸುಜಾತ ಅವರನ್ನು ತಕ್ಷಣ ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಅಲ್ಲಿ ಪರೀಕ್ಷಿಸಿದ ವೈದ್ಯರು ಅವರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.ದುರಂತದಲ್ಲಿ ಸಾವನ್ನಪ್ಪಿರುವ ಸುಜಾತಾ ಆಚಾರ್ಯ ಅವರ ಪತಿ ಅಣ್ಣಪ್ಪಯ್ಯ ಆಚಾರಿ ಕೂಲಿ ಕೆಲಸ ಮಾಡಿಕೊಂಡಿದ್ದಾರೆ. ಮೃತರಿಗೆ ಓರ್ವ ಪುತ್ರ ಹಾಗೂ ಇಬ್ಬರು ಪುತ್ರಿಯನ್ನು ಇದ್ದಾರೆ. ಕಂಡ್ಲೂರಿನ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ