ಉಡುಪಿ: ಕಳೆದ ಮೂರು‌ ದಿನಗಳಿಂದ ಉಡುಪಿ ಜಿಲ್ಲೆಯಾದ್ಯಂತ ವ್ಯಾಪಕ ಮಳೆ ಸುರಿದಿದೆ. ಉಡುಪಿ, ಬ್ರಹ್ಮಾವರ, ಬೈಂದೂರು, ಕುಂದಾಪುರ, ಹೆಬ್ರಿ, ಕಾರ್ಕಳ, ಕಾಪು ತಾಲೂಕಿನಲ್ಲಿ ಧಾರಾಕಾರ ಮಳೆಯಾಗಿದೆ.

ಇಂದು ಬೆಳಿಗ್ಗೆಯಿಂದಲೇ ನಿರಂತರ ಮಳೆ ಸುರಿಯುತ್ತಿದ್ದು, ಇದರ ಪರಿಣಾಮ ಕಾಪು ತಾಲೂಕಿನ ಪಡುಬಿದ್ರೆಯ ಪಾದೆ ಬೆಟ್ಟು ಪರಿಸರ ಜಲಾವೃತಗೊಂಡಿದೆ. ಕಾಮಿನಿ ನದಿ ತುಂಬಿ ಹರಿಯುತ್ತಿದ್ದು, ಇದರಿಂದ ತಗ್ಗು ಪ್ರದೇಶಗಳಲ್ಲಿ ಕೃತಕ ನೆರೆ ಸೃಷ್ಟಿಯಾಗಿದೆ.

ಮುಂಜಾಗೃತ ಕ್ರಮವಾಗಿ ಕಾಪು ತಹಶೀಲ್ದಾರ್ ಪ್ರತಿಭಾ ಆರ್ ನೇತೃತ್ವದಲ್ಲಿ ಐದು ಮನೆಗಳ 24 ಮಂದಿಯನ್ನು ಸುರಕ್ಷಿತ ಸ್ಥಳಕ್ಕೆ ಶಿಫ್ಟ್ ಮಾಡಲಾಯಿತು. ಗೃಹ ರಕ್ಷಣಾ ದಳ ತಂಡದಿಂದ ರಕ್ಷಣಾ ಕಾರ್ಯಾಚರಣೆ ನಡೆಯಿತು.