ಉಡುಪಿ: ಕೋಡಿಬೆಂಗ್ರೆ ಬೋಟು ದುರಂತ ಪ್ರಕರಣ ನಡೆದಿದ್ದು, ಲೈಫ್ ಜಾಕೆಟ್ ಧರಿಸುವುದು ಕಡ್ಡಾಯ ಎಂದು ಜಿಲ್ಲಾಧಿಕಾರಿ ಆದೇಶ ಮಾಡಿದ್ದರು. ಆದರೆ ಜಿಲ್ಲಾಧಿಕಾರಿಗಳೇ ಲೈಫ್ ಜಾಕೆಟ್ ಧರಿಸದ ವಿಡಿಯೋ ವೈರಲ್ ಆಗಿದೆ. ಕಡ್ಡಾಯ ಆದೇಶವನ್ನು ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ ಮಾಡಿದ್ದರು. ದುರ್ಘಟನೆ ನಡೆದ ದಿನವೇ ಸೈಂಟ್ ಮೇರಿಸ್ ದ್ವೀಪದಲ್ಲಿ ಧ್ವಜಾರೋಹಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ಅಧಿಕಾರಿಗಳು ಬೋಟ್ ನಲ್ಲಿ ತೆರಳಿದ್ದರು.
ಬೋಟ್ ಪ್ರಯಾಣ ವೇಳೆ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಜಾಕೆಟ್ ಧರಿಸಿರಲಿಲ್ಲ. ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಕೂಡ ಲೈಫ್ ಜಾಕೆಟ್ ಧರಿಸಿಲ್ಲ. ಅಧಿಕಾರಿಗಳೇ ಸೂಕ್ತ ಮುನ್ನೆಚ್ಚರಿಕೆ ಕೈಗೊಳ್ಳದ ಬಗೆಗೂ ಆಕ್ಷೇಪ ವ್ಯಕ್ತವಾಗಿದೆ. ಬೋಟ್ ದುರಂತದಲ್ಲಿ ಮೂವರು ಜೀವ ಕಳೆದುಕೊಂಡಿದ್ದಾರೆ. ಕೊಡಿಬೆಂಗ್ರೆಯ ಪ್ರವಾಸಿ ಬೋಟ್ ಮುಳುಗಡೆಯಿಂದ ದುರಂತ ಸಂಭವಿಸಿತ್ತು.
ಘಟನೆ ಬೆನ್ನಲ್ಲೇ ಜಿಲ್ಲಾಧಿಕಾರಿಗಳಿಂದ ಕಠಿಣ ಕ್ರಮದ ಆದೇಶ ಹೊರಡಿಸಲಾಗಿದೆ. ಪ್ರವಾಸಿ ಬೊಟುಗಳಲ್ಲಿ ಲೈಫ್ ಜಾಕೆಟ್ ಧರಿಸುವುದು ಕಡ್ಡಾಯವಾಗಿದೆ. ಕಡಲಿಗೆ ಇಳಿಯುವ ಮುನ್ನ ಲೈಫ್ ಜಾಕೆಟ್ ಧರಿಸುವಂತೆ ನೋಡಿಕೊಳ್ಳಬೇಕು. ಲೈಫ್ ಜಾಕೆಟ್ ಬಳಕೆ ಬಗ್ಗೆ ಕರಪತ್ರ ಪ್ರಕಟಿಸಬೇಕು. ಎಲ್ಲರೂ ಲೈಫ್ ಜಾಕೆಟ್ ಧರಿಸಿದರೆ ಮಾತ್ರ ಬೋಟ್ ಸಾಗಲಿದೆ ಎಂದು ರೆಕಾರ್ಡ್ ಆಡಿಯೋ ಅಳವಡಿಸಬೇಕು
ಎಂದು ಜಿಲ್ಲಾಧಿಕಾರಿ ಸೂಚನೆ ನೀಡಿದರು.

