ಉಡುಪಿ: ಜಮ್ಮು-ಕಾಶ್ಮೀರದ ಪೂಂಚ್ ನಲ್ಲಿ ಹುತಾತ್ಮ ಯೋಧ ಅನೂಪ್ ಪೂಜಾರಿ ಪಾರ್ಥಿವ ಶರೀರ ಉಡುಪಿಗೆ ಆಗಮಿಸಿದ್ದು, ಮಂಗಳೂರು ವಿಮಾನ ನಿಲ್ದಾಣದಲ್ಲಿ ಪಾರ್ಥಿವ ಶರೀರವನ್ನು ಸಂಸದ ಕೋಟ ಶ್ರೀನಿವಾಸ ಪೂಜಾರಿ ಸ್ವೀಕರಿಸಿದ್ದಾರೆ.

ಸಂಸದರ ನೇತೃತ್ವದಲ್ಲಿ ಹುತಾತ್ಮ ಯೋಧ ಪಾರ್ಥಿವ ಶರೀರ ಉಡುಪಿಗೆ ರವಾನೆಯಾಗಿದ್ದು, ಉಡುಪಿಯ ಸರಕಾರಿ ಆಸ್ಪತ್ರೆಯಲ್ಲಿ ಪಾರ್ಥಿವ ಶರೀರ ಇಟ್ಟಿದ್ದು, ಬೆಳಿಗ್ಗೆ 8ಗಂಟೆಗೆ ಕುಂದಾಪುರ ತಾಲೂಕಿನ ತೆಕ್ಕಟ್ಟೆಯಿಂದ ಮೆರವಣಿಗೆ ಮೂಲಕ ಅಂತಿಮ ದರ್ಶನ ನಡೆಯಲಿದೆ.

ಬಿಜಾಡಿ ಗ್ರಾಮದಲ್ಲಿರುವ ಮನೆಯಲ್ಲಿ ಧಾರ್ಮಿಕ ವಿಧಿ ವಿಧಾನ ನಡೆಯಲಿದ್ದು, ಬಳಿಕ ಬೀಜಾಡಿ ಶಾಲೆಯಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.  ಶಾಲೆಯ ಪಕ್ಕ ಇರುವ ಸಮುದ್ರ ತೀರದಲ್ಲಿ ಅಂತಿಮ ಸಂಸ್ಕಾರಕ್ಕೆ ಸಕಲ ಸಿದ್ಧತೆ ನಡೆಸಲಾಗಿದೆ.

ಹುತಾತ್ಮ ಯೋಧ ಅನೂಪ್ ಪೂಜಾರಿ ಅಂತಿಮ ಯಾತ್ರೆಗೆ ವಾಹನ ಸಿದ್ಧತೆಯಾಗಿದ್ದು, ತೆರೆದ ವಾಹನದಲ್ಲಿ ಯೋಧನ ಪಾರ್ಥಿವದ ಮೆರವಣಿಗೆ ನಡೆಯಲಿದೆ. ಹೂವಿನ ಅಲಂಕಾರದಿಂದ ವಾಹನ ಸಿದ್ದಗೊಳ್ಳುತ್ತಿದ್ದು, ರಾಷ್ಟ್ರೀಯ ಹೆದ್ದಾರಿಯಲ್ಲಿ ಮೆರವಣಿಗೆ ಸಾಗಲಿದೆ.