ಉಡುಪಿ: ಭೋವಿ ಸಮುದಾಯ ಉಡುಪಿ ದ.ಕ. ಜಿಲ್ಲೆಯಲ್ಲಿ ಸ್ಪರ್ಶ ಜಾತಿಗೆ ಸೇರಿದವರು. ಅವರಿಗೆ ಅಸ್ಪೃಶ್ಯತೆ ನೋವಿನ ಅನುಭವ ಇಲ್ಲ. ಹಾಗಾಗಿ ಅವರು ಅಸ್ಪೃಶ್ಯ ಜಾತಿಯವರಲ್ಲ. ಇವರಿಗೆ ಪರಿಶಿಷ್ಟ ಜಾತಿ ಪ್ರಮಾಣಪತ್ರ ಪಡೆಯುವ ಯಾವುದೇ ಅರ್ಹತೆ ಇಲ್ಲ. ಆದುದರಿಂದ ಇವರ ಪ್ರತಿಭಟನೆಗೆ ಯಾವುದೇ ಕವಾಡೆ ಕಾಸಿನ ಕಿಮ್ಮತ್ತಿಲ್ಲ ಎಂದು ದಸಂಸ ಜಿಲ್ಲಾ ಮುಖಂಡ ಮಂಜುನಾಥ್ ಗಿಳಿಯಾರು ಆರೋಪಿಸಿದ್ದಾರೆ.

ತಮಿಳುನಾಡಿನಿಂದ ವಲಸೆ ಬಂದ ಈ ಬಲಾಢ್ಯ ಜಾತಿಯವರಿಗೆ ಯಾವುದೇ ಕಾರಣಕ್ಕೂ ಜಾತಿಪ್ರಮಾಣಪತ್ರ ನೀಡುವ ಮೂಲಕ ನಿಜವಾದ ಅಸ್ಪೃಶ್ಯರಿಗೆ ಅನ್ಯಾಯ ಮಾಡಬಾರದು ಎಂದು ಹೋರಾಟ ಮಾಡಿದ್ದೇವೆ. ಅದಕ್ಕೆ ಮಣಿದ ಸರಕಾರ ಭೋವಿ ಜನಾಂಗಕ್ಕೆ ಈ ಪ್ರಮಾಣಪತ್ರ ಕೊಡುವುದನ್ನು ನಿಲ್ಲಿಸಿತ್ತು. ಇದೇ ನಿಲುವನ್ನು ಜಿಲ್ಲಾಡಳಿತ ಮುಂದುವರೆಸಬೇಕು. ಒಂದು ವೇಳೆ ಪ್ರಮಾಣ ಪತ್ರ ಕೊಟ್ಟರೆ ದಸಂಸ ನೇತೃತ್ವದಲ್ಲಿ ಜನಾಂದೋಲನ ಮಾಡಲಾಗುವುದು. ಅಲ್ಲದೆ ಇದರ ಹಿಂದೆ ಇರುವ ರಾಜಕಾರಣಿಗಳ ಪಿತೂರಿಯ ವಿರುದ್ಧ ಪ್ರತಿಭಟನೆ ನಡೆಸಿ ಅವರ ಬಣ್ಣ ಬಯಲಿಗೆ ಎಳೆಯುತ್ತೇವೆ ಎಂದು ಅವರು ಎಚ್ಚರಿಕೆ ನೀಡಿದರು.