ಉಡುಪಿ: ಜಿಲ್ಲಾ ಸಾರ್ವಜನಿಕ ಆಸ್ಪತ್ರೆಗೆ ಉಡುಪಿ ಸಂತೆಕಟ್ಟೆ, ಗೋಪಾಲಪುರದ ವಿಭಾ ದೇವದಾಸ್ ಮೆಮೋರಿಯಲ್ ಟ್ರಸ್ಟ ನ ದೇವದಾಸ್ ರವರು ಅಲ್ಟ್ರಾ ಸೌಂಡ್ ಯಂತ್ರವನ್ನು ದಾನವಾಗಿ ನೀಡುವ ಹಸ್ತಾಂತರ ಕಾರ್ಯಕ್ರಮ ಉಡುಪಿಯ ಜಿಲ್ಲಾ ಆಸ್ಪತ್ರೆಯ ಸಭಾಂಗಣದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಶಾಸಕ ಯಶ್ ಪಾಲ್ ಸುವರ್ಣ ಅವರು ಹಸ್ತಾಂತರವನ್ನು ಸರ್ಕಾರದ ಪರವಾಗಿ ಸ್ವೀಕರಿಸಿ ಮಾತನಾಡಿ, ವಿಭಾ ಮೆಮೋರಿಯಲ್ ಟ್ರಸ್ಟ್ ವತಿಯಿಂದ 25 ಲಕ್ಷ ರೂ. ಗೂ ಹೆಚ್ಚು ಮೊತ್ತದ ಅಲ್ಟ್ರಾ ಸೌಂಡ್ ಯಂತ್ರವನ್ನು ದಾನವಾಗಿ ಜಿಲ್ಲಾ ಆಸ್ಪತ್ರೆಗೆ ನೀಡಿರುವುದು ಬಡಜನರು ಆರೋಗ್ಯ ಚಿಕಿತ್ಸೆ ಯನ್ನು ಪಡೆಯಲು ಒಂದು ಉತ್ತಮ ಕಾರ್ಯವಾಗಿದೆ ಎಂದ ಅವರು ವಿಭಾ ಮೆಮೋರಿಯಲ್ ಟ್ರಸ್ಟ್ ಗೆ ಕೃತಜ್ಞತೆಯನ್ನು ತಿಳಿಸಿದರು.
ಸರ್ಕಾರ ಜನಸಾಮಾನ್ಯರಿಗೆ ಉತ್ತಮ ಆರೋಗ್ಯ ಸೇವೆಗಳನ್ನು ಒದಗಿಸಬೇಕೆಂಬ ಉದ್ದೇಶದಿಂದ ಅನೇಕ ಯೋಜನೆಗಳು ಹಾಗೂ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಇದು ಸಮರ್ಪಕವಾಗಿ ಅನುಷ್ಠಾನಗೊಳಿಸುವುದರೊಂದಿಗೆ ಜನಸಾಮಾನ್ಯರು ಒಳ್ಳೆಯ ಆರೋಗ್ಯವನ್ನು ಹೊಂದುವಂತೆ ಸೇವೆಯನ್ನು ನೀಡಿ ಸಹಕರಿಸಬೇಕು ಎಂದರು.
ಮುಖಂಡರಾದ ಪ್ರಸಾದ್ ಕಾಂಚನ್ ಮಾತನಾಡಿ, ವಿಭಾ ಮೆಮೋರಿಯಲ್ ಟ್ರಸ್ಟ್ ವತಿಯಿಂದ ಜಿಲ್ಲಾ ಆಸ್ಪತ್ರೆಗೆ ಅಲ್ಟ್ರಾ ಸೌಂಡ್ ಯಂತ್ರವನ್ನು ಸಾರ್ವಜನಿಕ ಆಸ್ಪತ್ರೆಗೆ ನೀಡಿರುವುದು ಸೇವಾ ಮನೋಭಾವದ ಕಾರ್ಯವಾಗಿದೆ. ಇದರಿಂದ ಜಿಲ್ಲೆಯ ಹಾಗೂ ರಾಜ್ಯ ವಿವಿಧ ಮೂಲಗಳಿಂದ ಆಸ್ಪತ್ರೆಗೆ ಆಗಮಿಸುವ ರೋಗಿಗಳಿಗೆ ಅನುಕೂಲವಾಗಲಿದೆ ಎಂದರು.
ದೇವದಾಸ್ ರವರು ತಮ್ಮ ಮಗಳಾದ ವಿಭಾರವರ ಸವಿನೆನಪಿಗಾಗಿ ಹಾಗೂ ಬಡಜನರ ಸೇವೆಗೆ ಅನುಕೂಲವಾಗಬೇಕೆಂಬ ಉದ್ದೇಶದಿಂದ ಅಲ್ಟ್ರಾ ಸ್ಕ್ಯಾನಿಂಗ್ ಯಂತ್ರವನ್ನು ದಾನವಾಗಿ ಜಿಲ್ಲಾ ಆಸ್ಪತ್ರೆಗೆ ನೀಡಿದ್ದಾರೆ. ಇದು ಮುಂದಿನ ದಿನಗಳಲ್ಲಿ ಜನರ ಉಪಯೋಗವಾಗಬೇಕು ಎಂದ ಅವರು ಸರ್ಕಾರದ ಕೆಲಸ ಕಾರ್ಯಗಳಿಗೆ ಜನಸಾಮಾನ್ಯರ ಸಹ ಭಾಗಿತ್ವದಿಂದ ಉತ್ತಮ ಸೌಲಭ್ಯಗಳನ್ನು ನೀಡಲು ಸಾಧ್ಯವಾಗುತ್ತದೆ ಎಂದರು.
ಈ ಹಿಂದೆ ಜಿಲ್ಲಾ ಆಸ್ಪತ್ರೆಯ ಸರ್ಜನ್ ರವರನ್ನು ಭೇಟಿಯಾದಾಗ ಅವರು ಆಸ್ಪತ್ರೆಯಲ್ಲಿ ಡಯಾಲಿಸಿಸ್ ಘಟಕ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಆದರೆ ಅಲ್ಟ್ರಾ ಸೌಂಡ್ ಯಂತ್ರದ ಕೊರತೆ ಇದೆ ಎಂದು ನನ್ನ ಗಮನಕ್ಕೆ ತಂದಿದ್ದರು. ನಾನು ಅನೇಕ ದಾನಿಗಳನ್ನು ಸಂಪರ್ಕಿಸಿದಾಗ ಯಂತ್ರದ ಮೊತ್ತವು 25 ಲಕ್ಷಕ್ಕೂ ಹೆಚ್ಚು ಆಗುತ್ತದೆ ಎಂದು ಯಾರೂ ಮುಂದೆ ಬಂದಿರುವುದಿಲ್ಲ. ಆದರೆ ದೇವದಾಸ್ ಕುಟುಂಬದವರು ಮುಂದೆ ಬಂದು ಈ ಕಾರ್ಯವನ್ನು ಮಾಡಿದ್ದಾರೆ ಎಂದು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಅಶೋಕ್ ಕೊಡವೂರು,ಜಿಲ್ಲಾ ಸರ್ಜನ್ ಡಾ. ಅಶೋಕ್ ,ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ರಾಮ್ ರಾವ್, ಮಾನಸಿಕ ತಜ್ಞ ಡಾ.ವಾಸುದೇವ್ ನಿವಾಸಿ ವೈದ್ಯಾಧಿಕಾರಿ ಡಾ.ಆಮ್ನ ಹೆಗ್ಡೆ, ಶಂಕರ್ ಸಾಲಿಯಾನ್ ದೇವದಾಸ್ ಕುಟುಂಬದ ಸದಸ್ಯರುಹಾಗೂ ಮತ್ತಿತರರು ಉಪಸ್ಥಿತರಿದ್ದರು.

