ಉಡುಪಿ: ಕೃಷ್ಣ ಜನ್ಮಾಷ್ಟಮಿ ಹಿನ್ನೆಲೆಯಲ್ಲಿ ಉಡುಪಿ ನಗರದೆಲ್ಲೆಡೆ ಸಂಭ್ರಮ ಮನೆಮಾಡಿದ್ದು, ಹುಲಿವೇಷಧಾರಿಗಳ ಕುಣಿತ ಜನರ ಗಮನ ಸೆಳೆಯುತ್ತಿದೆ. ಹುಲಿವೇಷದೊಂದಿಗೆ ವಿವಿಧ ಬಗೆಯ ವೇಷಧಾರಿಗಳು ನಗರದ ಪ್ರಮುಖ ರಸ್ತೆಗಳ ಮೂಲಕ ಸಂಚರಿಸಿ ಹಬ್ಬದ ಮೆರುಗು ಹೆಚ್ಚಿಸಿದ್ದಾರೆ.

ಹೆಣ್ಣು ಹುಲಿಗಳು, ಪುಟಾಣಿ ಹುಲಿಗಳು ಸೇರಿದಂತೆ ವಿವಿಧ ವೇಷಧಾರಿಗಳ ಕಲರವ ನಗರದಾದ್ಯಂತ ಕಂಡುಬಂದಿದೆ. ಈ ನಡುವೆ ಮೂರು ತಿಂಗಳ ಪುಟ್ಟ ಕಂದಮ್ಮ ಹರ್ಷಿವ್‌ಗೂ ಹುಲಿವೇಷ ಹಾಕಿ ಹೆತ್ತವರು ಸಂಭ್ರಮಿಸಿರುವುದು ವಿಶೇಷವಾಗಿ ಗಮನ ಸೆಳೆದಿದೆ.

ಹುಲಿವೇಷ ಧರಿಸಿದ್ದ ತಂಡದ ಸದಸ್ಯರು ಮಗುವನ್ನು ಕೈಯಲ್ಲಿ ಎತ್ತಿಕೊಂಡು ಕುಣಿದು ಸಂಭ್ರಮಿಸಿದ್ದಾರೆ. ಪುಟ್ಟ ಮಗುವಿಗೂ ಹುಲಿವೇಷ ಹಾಕಿರುವ ದೃಶ್ಯ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದ್ದು, ಈ  ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.