ಉಡುಪಿ: ವಿಧಾನಸಭಾ ಕ್ಷೇತ್ರದ ಅಭಿವೃದ್ಧಿ, ಕ್ಷೇತ್ರದ ಜನರ ಸಮಸ್ಯೆಗೆ ಧ್ವನಿಯಾಗಬೇಕಾದ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಅವರು ಕೇವಲ ಪ್ರಚಾರ ಗಿಟ್ಟಿಸಿಕೊಳ್ಳುವ ಸಲುವಾಗಿ ವಿಧಾನಸಭೆಗೆ ತೆರಳುತ್ತಿದ್ದಾರೆಯೇ ಎಂಬ ಅನುಮಾನ ಮೂಡುತ್ತಿದೆ. ವಿಧಾನಸಭಾಧಕ್ಷರೊಂದಿಗೆ ಸದನದಲ್ಲಿ ನಡೆಸಿದ ಪ್ರಶ್ನಾವಳಿಯ ಚರ್ಚೆಯನ್ನು ಹಿಂದೂ ಧರ್ಮಕ್ಕೆ ಅವಮಾನ ಆಗಿದೆ ಎಂಬ ರೀತಿಯಲ್ಲಿ ಶಾಸಕರು ಬಿಂಬಿಸುತ್ತಿದ್ದಾರೆ. ಸಭಾಧ್ಯಕ್ಷರು ಒಂದು ಧರ್ಮಕ್ಕೆ ಅವಮಾನ ಮಾಡಿದ್ದಾರೆ ಎಂಬ ರೀತಿಯಲ್ಲಿ ಶಾಸಕರು ಬಿಂಬಿಸುತ್ತಿರುವುದು ಸರಿಯಲ್ಲ ಎಂದು ಕಾಂಗ್ರೆಸ್ ಮುಖಂಡ ಪ್ರಸಾದ್ ರಾಜ್ ಕಾಂಚನ್ ಹೇಳಿದರು.
ಉಡುಪಿಯಲ್ಲಿಂದು ಸುದ್ದಿಗೋಷ್ಠಿ ನಡೆಸಿದ ಅವರು, ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಅವರ ಬಗ್ಗೆ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಅವರು ಮಾಡಿರುವ ಆರೋಪಕ್ಕೆ ತಿರುಗೇಟು ನೀಡಿದರು.
ಯಶ್ ಪಾಲ್ ಸುವರ್ಣ ಅವರು ಒಂದು ಧರ್ಮದ ಶಾಸಕರು ಅಲ್ಲ. ಅವರು ಎಲ್ಲ ಧರ್ಮದ ಪ್ರತಿನಿಧಿ. ಶಾಸಕರು ತಮ್ಮ ಕ್ಷೇತ್ರದ ಸಮಸ್ಯೆ, ಅಭಿವೃದ್ಧಿ ಬಗ್ಗೆ ಅಧಿವೇಶನದಲ್ಲಿ ಪ್ರಸ್ತಾಪಿಸಿ, ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ತರುವ ಕೆಲಸ ಮಾಡಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಘವೇಂದ್ರ ಶೆಟ್ಟಿ, ಮುಖಂಡರಾದ ಕೀರ್ತಿ ಶೆಟ್ಟಿ, ಕುಶಾಲ್ ಶೆಟ್ಟಿ, ಪ್ರಶಾಂತ್ ಪೂಜಾರಿ ಇದ್ದರು.

