ಉಡುಪಿ: ಪರ್ಯಾಯ ಶ್ರೀಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಆಶ್ರಮ ಸ್ವೀಕಾರ, ಪೀಠಾರೋಹಣದ ಸುವರ್ಣ ಮಹೋತ್ಸವದ ನೆನಪಿಗಾಗಿ ಅನ್ನಬ್ರಹ್ಮ, ಉತ್ಸವ ಬ್ರಹ್ಮನಾದ ಉಡುಪಿ ಶ್ರೀಕೃಷ್ಣನಿಗೆ ‘ಪಾರ್ಥಸಾರಥಿ ಸುವರ್ಣ ರಥ ಸಮರ್ಪಣೆ’ ಕಾರ್ಯಕ್ರಮ ಇದೇ ಡಿ.27ರಂದು ನಡೆಯಲಿದೆ.

ಈ ಕುರಿತು ಉಡುಪಿ ಗೀತಾಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಪರ್ಯಾಯ ಶ್ರೀಪುತ್ತಿಗೆ ಮಠಾಧೀಶ ಶ್ರೀಸುಗುಣೇಂದ್ರ ತೀರ್ಥ ಶ್ರೀಪಾದರು, ಡಿ.26ರಂದು ಮಧ್ಯಾಹ್ನ 3.30ಕ್ಕೆ ಜೋಡುಕಟ್ಟೆಯಿಂದ ಕೃಷ್ಣಮಠದವರೆಗೆ ಸುವರ್ಣ ರಥದ ವೈಭವದ ಶೋಭಾಯಾತ್ರೆ ನಡೆಯಲಿದ್ದು, ಮಂತ್ರಾಲಯ ಮಠದ ಸುಬುಧೇಂದ್ರ ತೀರ್ಥ ಶ್ರೀಪಾದರು ಮೆರವಣಿಗೆ ಉದ್ಘಾಟಿಸಲಿದ್ದಾರೆ.

ಸಂಜೆ 6.30ಕ್ಕೆ ರಾಜಾಂಗಣದಲ್ಲಿ ಧರ್ಮ ಸಭೆ ನಡೆಯಲಿದೆ. ಡಿ. 27ರಂದು ಸಂಜೆ 6ಗಂಟೆಗೆ ರಥಬೀದಿಯಲ್ಲಿ ಪಾರ್ಥಸಾರಥಿ ಸ್ವರ್ಣರಥದಲ್ಲಿ ಶ್ರೀಕೃಷ್ಣನ ಉತ್ಸವಕ್ಕೆ ಅದಮಾರು ಮಠದ ವಿಶ್ವಪ್ರಿಯತೀರ್ಥ ಶ್ರೀಪಾದರು ಚಾಲನೆ ನೀಡಲಿದ್ದಾರೆ. ಮಂತ್ರಾಲಯದ ಸುಬುಧೇಂದ್ರ ಸ್ವಾಮೀಜಿ, ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನತೀರ್ಥ ಶ್ರೀಪಾದರು, ಭಂಡಾರಕೇರಿ ಮಠದ ವಿದ್ಯೇಶತೀರ್ಥ ಶ್ರೀಪಾದರು ಪಾಲ್ಗೊಳ್ಳಲಿದ್ದಾರೆ ಎಂದರು.

ಡಿ. 28ಕ್ಕೆ ಕೋಟಿ ತುಳಸಿ ಅರ್ಚನೆ:
ಉಡುಪಿ ತಾಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷ ಶ್ರೀಕಾಂತ್​ ಉಪಾಧ್ಯಾಯ ಮಾತನಾಡಿ, ಡಿ.28ರಂದು ಬೆಳಿಗ್ಗೆ 9 ಗಂಟೆಗೆ ಕೃಷ್ಣ ಮಠದ ರಾಜಾಂಗಣದಲ್ಲಿ ಉಡುಪಿ 26 ವಲಯಗಳ ಸುಮಾರು 2000 ವಿಪ್ರ ಬಾಂಧವರೊಂದಿಗೆ ಕೋಟಿ ತುಳಸಿ ಅರ್ಚನೆ ನಡೆಯಲಿದೆ. ಬೆಂಗಳೂರು, ಮೈಸೂರು ಹಾಗೂ ರಾಜ್ಯದ ವಿವಿಧ ಭಾಗಗಳಿಂದ ತುಳಸಿಯನ್ನು ತರಿಸಲಾಗುತ್ತಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಪುತ್ತಿಗೆ ಮಠ ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯ, ಬ್ರಾಹ್ಮಣ ಸಭಾದ ಶ್ರೀನಿವಾಸ ಬಲ್ಲಾಳ್​, ರಾಜೇಂದ್ರ, ನಾಗರಾಜ ಉಪಾಧ್ಯಾಯ, ಹಯವದನ ಭಟ್​ ಉಪಸ್ಥಿತರಿದ್ದರು.