ಉಡುಪಿ: ಶ್ರೀ ಕ್ಷೇತ್ರ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ವಾರ್ಷಿಕ ಮಹೋತ್ಸವವು ದೇಗುಲದ ತಂತ್ರಿ ರಾಘವೇಂದ್ರ ತಂತ್ರಿ ಕುಕ್ಕಿಕಟ್ಟೆ ನೇತೃತ್ವದಲ್ಲಿ ಪ್ರಧಾನ ಅರ್ಚಕ ರಾಘವೇಂದ್ರ ಉಪಾಧ್ಯಾಯ ಸಹಿತ ಋುತ್ವಿಜರ ಪೌರೋಹಿತ್ಯದೊಂದಿಗೆ ನಡೆಯಿತು.

ರಥೋತ್ಸವದ ಪ್ರಯುಕ್ತ ಪ್ರಾತಃಕಾಲ ಪೂಜೆ, ನವಕ ಪ್ರಧಾನ ಹೋಮ, ಕಲಶಾಭಿಷೇಕ, ಸಹಸ್ರ ಪುಷ್ಪಾರ್ಚನೆ, ಮಹಾಪೂಜೆ, ಪಲ್ಲಪೂಜೆ, ಸಾಮೂಹಿಕ ಪ್ರಾರ್ಥನೆ, ರಥಾರೋಹಣ ಬಲಿ, ನೃತ್ಯ ದರ್ಶನ, ಮಧ್ಯಾಹ್ನ ಮಹಾಲಕ್ಷ್ಮೀ ರಥಾರೋಹಣ, ಭಜನಾ ಕಾರ್ಯಕ್ರಮ, ಮಹಾಅನ್ನಸಂತರ್ಪಣೆ ನಡೆಯಿತು. ಸಾವಿರಾರು ಮಂದಿ ಅನ್ನಪ್ರಸಾದ ಸ್ವೀಕರಿಸಿದರು.

ಸಂಜೆ ತಾಳಮದ್ದಳೆ, ರಾತ್ರಿ ರಥಕ್ಕೆ ಅಜಕಾಯಿ ಸಮರ್ಪಣೆ, ಶ್ರೀ ಮನ್ಮಹಾರಥೋತ್ಸವ, ಭದ್ರಕಾಳಿ ಅಮ್ಮನವರ ದರ್ಶನ ಬಲಿ ಸೇವೆ, ಸುಡುಮದ್ದು ಪ್ರದರ್ಶನ, ಉತ್ಸವ ಬಲಿ, ಚೆಂಡೆ ಬಲಿ, ನಾಗಸ್ವರ ಬಲಿ ನಡೆಯಿತು.

ಶಾಸಕರಾದ ಗುರ್ಮೆ ಸುರೇಶ್‌ ಶೆಟ್ಟಿ, ಯಶ್‌ಪಾಲ್‌ ಸುವರ್ಣ, ಮಾಜಿ ಸಚಿವ ವಿನಯ್‌ ಕುಮಾರ್‌ ಸೊರಕೆ, ದ.ಕ. ಮೊಗವೀರ ಮಹಾಜನ ಸಂಘದ ಗೌರವ ಸಲಹೆಗಾರ ನಾಡೋಜ ಡಾ. ಜಿ. ಶಂಕರ್‌, ಬೆಣ್ಣೆಕುದ್ರು ಕುಲಮಹಾಸ್ರ್ತೀ ಅಮ್ಮನವರ ದೇವಸ್ಥಾನದ ಆಡಳಿತ ಮೊಕ್ತೇಸರ ಆನಂದ್‌ ಸಿ. ಕುಂದರ್‌, ದ. ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್‌ ಬೆಳ್ಳಂಪಳ್ಳಿ ಮೊದಲಾದವರು ಪಾಲ್ಗೊಂಡಿದ್ದರು.