ಉಡುಪಿ: ಕೋಟ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಇಂದು ಮತ್ತೊಮ್ಮೆ ರಸ್ತೆ ಅಪಘಾತ ಸಂಭವಿಸಿದೆ. ಕುಂದಾಪುರದಿಂದ ಉಡುಪಿ ಕಡೆಗೆ ಬರುತ್ತಿದ್ದ ಟ್ರಕ್ ವೊಂದು ಅಮೃತೇಶ್ವರೀ ದೇವಸ್ಥಾನಕ್ಕೆ ತೆರಳುವ ಜಂಕ್ಷನ್ ಬಳಿ ಬೈಕ್ ಗೆ ಡಿಕ್ಕಿ ಹೊಡೆದಿದೆ.
ಅತೀ ವೇಗದಲ್ಲಿ ಬಂದ ಟ್ರಕ್ ಡಿಕ್ಕಿ ಹೊಡೆದ ರಭಸಕ್ಕೆ ಬಲು ದೂರು ಬೈಕ್ ಸಮೇತ ಸವಾರನನ್ನು ಟ್ರಕ್ ಎಳೆದುಕೊಂಡು ಹೋಗಿದೆ. ಅದೃಷ್ಟವಶಾತ್ ಬೈಕ್ ಸವಾರ ಪಾಂಡೇಶ್ವರ ದಯಾನಂದ ಪೂಜಾರಿ ಅವರು, ಟ್ರಕ್ ನ ಚಕ್ರಕ್ಕೆ ಸಿಲುಕದೆ ಈಚೆ ಕಡೆ ಬಿದ್ದಿದ್ದರಿಂದ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕೋಟ ರಾಷ್ಟ್ರೀಯ ಹೆದ್ದಾರಿ 66ರ ಅಮೃತೇಶ್ವರಿ ದೇವಳದ ಬಳಿಯ ಈ ಜಂಕ್ಷನ್ ಅತ್ಯಂತ ಅವೈಜ್ಞಾನಿಕ ಜಂಕ್ಷನ್‌ಗಳಲ್ಲಿ ಒಂದಾಗಿದೆ. ಇಲ್ಲಿ ವಾರಕ್ಕೆ ಎರಡು ಮೂರು ಸಣ್ಣ ಪುಟ್ಟ ಅಪಘಾತಗಳು ಜರುಗುತ್ತಿದ್ದರೂ ಹೆದ್ದಾರಿ ಇಲಾಖೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ.
ಇಲ್ಲಿ ವೇಗ ಮಿತಿಗಾಗಿ ಬ್ಯಾರಿಕೇಡ್ ಹಾಕಲಾಗಿದ್ದರು ಕೂಡ ಕೆಲವರು ಅದನ್ನು ಪಕ್ಕಕ್ಕೆ ಸರಿಸುವ ಕಾರ್ಯ ಪದೇ ಪದೇ ಮಾಡುತ್ತಿದ್ದಾರೆ. ಹೀಗಾಗಿ ವೇಗ ಮಿತಿ ಇಲ್ಲಿದೇ ಸಾಕಷ್ಟು ಅಪಘಾತಗಳು ಸಂಭವಿಸುತ್ತಿದೆ.

