ಉಡುಪಿ: ರಾಜ್ಯದ ಸಾವಿರಾರು ಮೂಲನಿವಾಸಿ ಕುಟುಂಬಗಳ ಹೊಟ್ಟೆಗೆ ಬೀಳಬೇಕಿದ್ದ ಪೌಷ್ಟಿಕ ಆಹಾರ ಕಳೆದ ಐದು ತಿಂಗಳಿಂದ ತಲುಪಿಲ್ಲ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಡಿ ಜಾರಿಯಲ್ಲಿರುವ ಈ ಯೋಜನೆ ಸ್ಥಗಿತಗೊಂಡಿರುವ ಪರಿಣಾಮ, ಅರಣ್ಯ ಮತ್ತು ಅರಣ್ಯದಂಚಿನಲ್ಲಿರುವ ಮಕ್ಕಳು, ಗರ್ಭಿಣಿಯರು ಹಾಗೂ ವೃದ್ಧರು ಅಪೌಷ್ಟಿಕತೆಯ ಅಪಾಯ ಎದುರಿಸುತ್ತಿದ್ದಾರೆ ಎನ್ನಲಾಗಿದೆ. ವಿಳಂಬದ ನೆಪದಲ್ಲಿ ಸಾವಿರಾರು ಕುಟುಂಬಗಳನ್ನು ಸಂಕಷ್ಟಕ್ಕೆ ತಳ್ಳಲಾಗಿದೆ ಎಂದು ಪಲಾನುಭವಿಗಳು ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಡಿ ಜಾರಿಯಲ್ಲಿರುವ ಈ ಯೋಜನೆಯ ಲಾಭ ರಾಜ್ಯದ ಮೈಸೂರು, ಚಾಮರಾಜನಗರ, ಕೊಡಗು, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ 47 ಸಾವಿರದ 859 ಬುಡಕಟ್ಟು ಕುಟುಂಬಗಳಿಗೆ ತಲುಪಬೇಕಿತ್ತು.
ಕೊರಗ, ಜೇನುಕುರುಬ ಸೇರಿದಂತೆ ಕಾಡುಕುರುಬ, ಸೋಲಿಗ, ಯರವ, ಮಲೆಕುಡಿಯ, ಕುಡಿಯ, ಸಿದ್ದಿ, ಹಸಲರು, ಗೌಡಲು, ಗೊಂಡ ಹಾಗೂ ಬೆಟ್ಟಕುರುಬ ಸೇರಿದಂತೆ 13 ಬುಡಕಟ್ಟು ಸಮುದಾಯಗಳ ಫಲಾನುಭವಿಗಳು ಇಂದು ಸರ್ಕಾರದ ನೆರವಿಗಾಗಿ ಕಾಯುತ್ತಿದ್ದಾರೆ.
ಮಳೆಗಾಲದ ಈ ಸಂದರ್ಭದಲ್ಲಿ ದಿನನಿತ್ಯದ ಬದುಕೇ ದುಸ್ತರವಾಗಿರುವಾಗ, ಪೌಷ್ಟಿಕ ಆಹಾರ ಸ್ಥಗಿತಗೊಂಡಿರುವುದು ಮಕ್ಕಳ ಆರೋಗ್ಯ, ಗರ್ಭಿಣಿಯರ ಪೌಷ್ಟಿಕತೆ ಹಾಗೂ ವೃದ್ಧರ ಜೀವಿತದ ಮೇಲೂ ಗಂಭೀರ ಪರಿಣಾಮ ಬೀರುವ ಆತಂಕವಿದೆ ಎಂದು ಹೇಳಲಾಗುತ್ತಿದೆ.
ಇದೀಗ ಮತ್ತೆ ಟೆಂಡರ್ ಪ್ರಕ್ರಿಯೆಯ ವಿಳಂಬದ ಕಾರಣ ನೀಡಿ ಇನ್ನೂ ಮೂರು ತಿಂಗಳು ವಿಳಂಬವಾಗುವ ಸಾಧ್ಯತೆಯೂ ಇದೆ ಎಂದು ಹೇಳಲಾಗುತ್ತಿದೆ ಯೋಜನೆಗೆ ಮೀಸಲಾದ ಅನುದಾನ ಎಲ್ಲಿದೆ? ಆಹಾರ ವಿತರಣೆ ಏಕೆ ನಿಂತಿದೆ? ಇಲಾಖೆಯ ನಿರ್ಲಕ್ಷ್ಯವೇ ಇದಕ್ಕೆ ಕಾರಣವೇ? ಪೌಷ್ಟಿಕ ಆಹಾರ ಯೋಜನೆಯಲ್ಲಿ ಅಕ್ರಮ ನಡೆದಿದೆಯೇ? ಎಂಬ ಪ್ರಶ್ನೆಗಳನ್ನು ಸಮುದಾಯದ ಮುಖಂಡರು ಎತ್ತಿದ್ದಾರೆ.
ಹಸಿವಿನೊಂದಿಗೆ ಹೋರಾಡುತ್ತಿರುವ ಬುಡಕಟ್ಟು ಕುಟುಂಬಗಳ ಬದುಕಿನ ಜೊತೆ ಚೆಲ್ಲಾಟ ಮಾಡಬಾರದು. ಪೌಷ್ಟಿಕ ಆಹಾರವನ್ನು ತಕ್ಷಣ ಪೂರೈಸಬೇಕು. ಯೋಜನೆಯಲ್ಲಿ ಅಕ್ರಮ ನಡೆದಿದ್ದರೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಮುದಾಯ ಆಗ್ರಹಿಸಿದೆ.
ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯೇ ಈಗ ಸಾವಿರಾರು ಮೂಲನಿವಾಸಿಗಳ ಪ್ರಶ್ನೆಯಾಗಿ ಪರಿಣಮಿಸಿದೆ. ಸರ್ಕಾರ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಈ ಆರೋಪಗಳಿಗೆ ಯಾವ ಸ್ಪಷ್ಟನೆ ನೀಡಲಿದೆ? ಪೌಷ್ಟಿಕ ಆಹಾರ ವಿತರಣೆ ಯಾವಾಗ ಆರಂಭವಾಗಲಿದೆ? ಎಂಬ ಪ್ರಶ್ನೆಗಳಿಗೆ ಉತ್ತರಕ್ಕಾಗಿ ಸಾವಿರಾರು ಬುಡಕಟ್ಟು ಕುಟುಂಬಗಳು ಕಾಯುತ್ತಿವೆ.

