ಉಡುಪಿ: ರಾಷ್ಟ್ರೀಯ ಹೆದ್ದಾರಿ 66ರ ಹೆಜಮಾಡಿ ಟೋಲ್ ವ್ಯಾಪ್ತಿಯ ಸ್ಥಳೀಯರಿಗೆ ಸಾಸ್ತಾನ ಮತ್ತು ಶಿರೂರು ಟೋಲ್ ಕೇಂದ್ರಗಳ ಮಾದರಿಯಲ್ಲಿ ಸುಂಕ ವಿನಾಯಿತಿ ಅಥವಾ ಮಾಸಿಕ ಪಾಸ್ ಸೌಲಭ್ಯ ಕಲ್ಪಿಸುವಂತೆ ಲೋಕೋಪಯೋಗಿ ಇಲಾಖೆಯ ಕಾರ್ಯದರ್ಶಿಗೆ ಶಿಫಾರಸು ಪತ್ರ ಬರೆಯಲಾಗುವುದು ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಹೇಳಿದರು.
ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ರಾಷ್ಟ್ರೀಯ ಹೆದ್ದಾರಿ ಟೋಲ್ ಸುಂಕ ವಸೂಲಾತಿ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಾಸ್ತಾನ ಟೋಲ್ ಕೇಂದ್ರದಲ್ಲಿ 10 ಕಿ.ಮೀ. ವ್ಯಾಪ್ತಿಯ ಸ್ಥಳೀಯರಿಗೆ ವಾಹನ ಸುಂಕದಲ್ಲಿ ವಿನಾಯಿತಿ ನೀಡಲಾಗುತ್ತಿದೆ. ಶಿರೂರು ವ್ಯಾಪ್ತಿಯಲ್ಲೂ ಸ್ಥಳೀಯ ವಾಹನಗಳಿಗೆ ರಿಯಾಯಿತಿ ಮುಂದುವರಿದಿದೆ. ಇದೇ ಮಾದರಿಯನ್ನು ಹೆಜಮಾಡಿ ಟೋಲ್ ವ್ಯಾಪ್ತಿಯಲ್ಲೂ ಅನುಸರಿಸುವಂತೆ ಸ್ಥಳೀಯರಿಂದ ಬೇಡಿಕೆ ಬಂದಿದ್ದು, ಈ ಕುರಿತು ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದರು.
ಹೆಜಮಾಡಿ ಟೋಲ್ ಸುತ್ತಮುತ್ತ ವಾಸಿಸುವ ಸ್ಥಳೀಯರು ದೈನಂದಿನ ಕೆಲಸ ಕಾರ್ಯಗಳಿಗಾಗಿ ದಿನದಲ್ಲಿ ಹಲವು ಬಾರಿ ಟೋಲ್ ಮೂಲಕ ಸಂಚರಿಸಬೇಕಾಗುತ್ತದೆ. ಪ್ರತಿಬಾರಿಯೂ ಸುಂಕ ಪಾವತಿಸುವುದು ಅನಾನುಕೂಲವಾಗಿರುವುದರಿಂದ ನಿಗದಿತ ವ್ಯಾಪ್ತಿಯ ಸ್ಥಳೀಯ ವಾಹನಗಳಿಗೆ ಸುಂಕ ವಿನಾಯಿತಿ ಅಥವಾ ಮಾಸಿಕ ಪಾಸ್ ನೀಡುವ ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.
ರಾಷ್ಟ್ರೀಯ ಹೆದ್ದಾರಿ 66ರ ಕೆಲವು ಭಾಗಗಳಲ್ಲಿ ಸರ್ವಿಸ್ ರಸ್ತೆ ನಿರ್ಮಾಣಕ್ಕೆ ಈಗಾಗಲೇ ಅನುಮತಿ ದೊರೆತಿದ್ದು, ಕಾಮಗಾರಿಗಳನ್ನು ಶೀಘ್ರ ಆರಂಭಿಸಿ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ರಸ್ತೆ ರಿಪ್ಲೆಕ್ಟರ್‌ಗಳ ಅಳವಡಿಕೆ, ದಾರಿದೀಪ ವ್ಯವಸ್ಥೆ, ಹೊಂಡ–ಗುಂಡಿಗಳ ದುರಸ್ತಿ, ಒಳಚರಂಡಿ ಕಾಮಗಾರಿ ಹಾಗೂ ಜಂಕ್ಷನ್‌ಗಳಲ್ಲಿ ಸೂಕ್ತ ಸೂಚನಾ ಫಲಕ ಅಳವಡಿಕೆ ಸೇರಿದಂತೆ ಸುರಕ್ಷತಾ ಕಾಮಗಾರಿಗಳನ್ನು ಆದ್ಯತೆಯ ಮೇರೆಗೆ ಕೈಗೊಳ್ಳಬೇಕು. ಇದರಿಂದ ಅಪಘಾತಗಳನ್ನು ನಿಯಂತ್ರಿಸಲು ಸಾಧ್ಯವಾಗಲಿದೆ ಎಂದು ಅವರು ತಿಳಿಸಿದರು.
ಸಭೆಯಲ್ಲಿ ಸ್ಥಳೀಯರು ಹಾಗೂ ವಿವಿಧ ಸಂಘಟನೆಗಳ ಪ್ರತಿನಿಧಿಗಳು ಹೆಜಮಾಡಿ ಟೋಲ್ ವ್ಯಾಪ್ತಿಯ ನಿವಾಸಿಗಳಿಗೆ ಸಾಸ್ತಾನ ಮಾದರಿಯಲ್ಲಿ ವಿನಾಯಿತಿ ನೀಡಬೇಕು, ಸರ್ವಿಸ್ ರಸ್ತೆ ನಿರ್ಮಿಸಬೇಕು, ರಸ್ತೆ ದೀಪ ಅಳವಡಿಸಬೇಕು ಹಾಗೂ ಟೋಲ್ ಸಿಬ್ಬಂದಿ ಸಾರ್ವಜನಿಕರೊಂದಿಗೆ ಸಂಯಮದಿಂದ ವರ್ತಿಸುವಂತೆ ಕ್ರಮ ಕೈಗೊಳ್ಳಬೇಕು ಎಂಬುದು ಸೇರಿದಂತೆ ವಿವಿಧ ಅಹವಾಲುಗಳನ್ನು ಸಲ್ಲಿಸಿದರು.
ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್, ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಕಿರಣ್ ಎಸ್., ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಅಬ್ದುಲ್ ಜಾವೇದ್ ಆಯ್ಕೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

