ಉಡುಪಿ: ಕಳೆದ ಹಲವು ವರ್ಷಗಳಿಂದ ಪ್ರತ್ಯೇಕವಾಗಿದ್ದ ಮೂವರು ದಂಪತಿಗಳನ್ನು ಉಡುಪಿಯ ಕೌಟುಂಬಿಕ ನ್ಯಾಯಾಲಯ ಮತ್ತೆ ಒಂದುಗೂಡಿಸುವಲ್ಲಿ ಯಶಸ್ವಿಯಾಗಿದೆ. ಉಡುಪಿಯ ನ್ಯಾಯಾಲಯದಲ್ಲಿ ನಡೆದ ರಾಷ್ಟ್ರೀಯ ಲೋಕ ಅದಾಲತ್ ನಲ್ಲಿ ಪರಸ್ಪರ ಮಾಲಾರ್ಪಣೆ ಮಾಡಿಕೊಳ್ಳುವ ಮೂಲಕ ಮತ್ತೆ ಹಸೆಮಣೆ ಏರಿದರು.

2011ರಲ್ಲಿ ವಿವಾಹವಾಗಿ ಕೆಲವೇ ತಿಂಗಳುಗಳ ಬಳಿಕ ಸಣ್ಣಪುಟ್ಟ ಮನಸ್ತಾಪದಿಂದ ದಂಪತಿ 13 ವರ್ಷಗಳಿಂದ ದೂರವಿದ್ದರು. ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದ ಜೋಡಿಯನ್ನು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕಿರಣ್‌ ಎಸ್.ಗಂಗಣ್ಣವರ್, ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶ ಶ್ರೀನಿವಾಸ ಸುವರ್ಣ, ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಯೋಗೇಶ್ ಪಿ.ಆ‌ರ್. ನೇತೃತ್ವದಲ್ಲಿ ದಾಂಪತ್ಯ ಜೀವನದ ಮೌಲ್ಯವನ್ನು ತಿಳಿಸಲಾಯಿತು.

ಇಬ್ಬರೂ ಒಟ್ಟಾಗಿ ಬಾಳಲು ಪರಸ್ಪರ ಒಪ್ಪಿಗೆ ಸೂಚಿಸಿದ ಬಳಿಕ, ನ್ಯಾಯಾಧೀಶರ ಸಮ್ಮುಖದಲ್ಲೇ ಹೂವಿನ ಹಾರವನ್ನು ಬದಲಾಯಿಸಿ, ಸಿಹಿಯನ್ನು ತಿನ್ನಿಸುವ ಮೂಲಕ ದಂಪತಿಗಳ ಮುಂದಿನ ಜೀವನ ಸುಖಮಯವಾಗಿರಲಿ ಎಂದು ಹರಸಿದರು. 2018ರಲ್ಲಿ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನಲ್ಲಿ ಗುರು-ಹಿರಿಯರ ನಿಶ್ಚಯದಂತೆ ಹಸೆಮಣೆಯನ್ನು ಏರಿದ್ದ ಜೋಡಿಯೂ ಮನಸ್ತಾಪದೊಂದಿಗೆ 2019ರಿಂದ ದೂರವಾಗಿತ್ತು. 2021ರಿಂದ ಪ್ರತ್ಯೇಕವಾಗಿದ್ದ ದಂಪತಿ ಕೂಡ ಶನಿವಾರದ ಲೋಕ ಅದಾಲತ್ ನಲ್ಲಿ ಒಂದಾದರು.

ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದ ಪತಿ, ಪತ್ನಿಯನ್ನು ಮಧ್ಯಸ್ಥಿಕೆ ಮೂಲಕ ಸುಖ ಜೀವನ ನಡೆಸಲು ಸಲಹೆಯನ್ನು ನೀಡಲಾಗಿತ್ತು. ಇಬ್ಬರ ಒಪ್ಪಿಗೆ ನಂತರ ಉಡುಪಿ ಕೌಟುಂಬಿಕ ನ್ಯಾಯಾಲಯವು ಮರುಮದುವೆಗೆ ವೇದಿಕೆಯಾಯಿತು.

ಈ ಶುಭ ಗಳಿಗೆಗೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕಿರಣ್ ಎಸ್.ಗಂಗಣ್ಣವರ್, ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶ ಶ್ರೀನಿವಾಸ ಸುವರ್ಣ, ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಯೋಗೇಶ್ ಪಿ.ಆ‌ರ್., ಉಡುಪಿ ವಕೀಲರ ಸಂಘದ ಅಧ್ಯಕ್ಷ ರೆನೋಲ್ಡ್ ಪ್ರವೀಣ್ ಕುಮಾ‌ರ್, ಮಾಜಿ ಅಧ್ಯಕ್ಷ ಬಿ.ನಾಗರಾಜ್, ಉಪಾಧ್ಯಕ್ಷ ಮಿತ್ರಕುಮಾ‌ರ್ ಶೆಟ್ಟಿ ಸಾಕ್ಷಿಯಾದರು.