ಉಡುಪಿ: ನಾವು ತಿಳಿದುಕೊಂಡ ಸಿದ್ದಾಂತವನ್ನು ವಾದ ಮಂಡಿಸುವುದರ ಮೂಲಕ ಗೆಲ್ಲಬೇಕಾಗಿದೆ. ಇದು ಸಮಾಜ, ದೇಶ, ಧರ್ಮ, ಸತ್ಯವನ್ನು ಉಳಿಸುವ ದೃಷ್ಠಿಯಿಂದ ಅಂದಿಗಿಂತ ಇಂದು ಹೆಚ್ಚು ಮುಖ್ಯವಾಗಿದೆ ಎಂದು ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ವೇದವ್ಯಾಸಾಚಾರ್ಯ ಶ್ರೀಶಾನಂದರು ಹೇಳಿದ್ದಾರೆ.

ಬನ್ನಂಜೆ 90 ಉಡುಪಿ ನಮನ ಸಮಿತಿಯ ವತಿಯಿಂದ ಉಡುಪಿಯ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಆಯೋಜಿಸಲಾದ ವಿದ್ಯಾವಾಚಸ್ಪತಿ ಪದ್ಮಶ್ರೀ ಬನ್ನಂಜೆ ಗೋವಿಂದಾಚಾರ್ಯ ನೆನಪಿನ ‘ಬನ್ನಂಜೆ -90 ಉಡುಪಿ ನಮನ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸತ್ಯದರ್ಶನ ಮಾಡಿದ ಬನ್ನಂಜೆ ದಾರ್ಶನಿಕರಾದರು. ಶಾಸ್ತ್ರ ಜ್ಞಾನದಿಂದ ಹಾಗೂ ಧರ್ಮದ ಅತ್ಯುನ್ನತ ವಿಚಾರಗಳಿಂದ ಹೊರಗೆ ಹೊರಟು ಹೋದ ದೊಡ್ಡ ಯುವಕರ ಗುಂಪನ್ನು ವಾಪಾಸ್ಸು ಕರೆತರಲು ಶ್ರಮಿಸಿದ ವ್ಯಕ್ತಿ ಬನ್ನಂಜೆ ಎಂದು ಅವರು ತಿಳಿಸಿದರು.

ಉಡುಪಿ ಗಾಂಧಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಹರಿಶ್ಚಂದ್ರ ಮಾತನಾಡಿ, ಬನ್ನಂಜೆ ಗೋವಿಂದಾಚಾರ್ಯರ ಪ್ರವಚನಗಳನ್ನು ಶಾಲೆಗಳಲ್ಲಿ ಪ್ರತಿ ಶನಿವಾರ ಒಂದು ಗಂಟೆ ಪ್ರಸಾರ ಮಾಡಬೇಕು. ಅದಕ್ಕೆ ತಗಲುವ ವೆಚ್ಚವನ್ನು ಪಂಚಮಿ ಟ್ರಸ್ಟ್ ಮತ್ತು ಪಂಚಲಹರಿ ಫೌಂಡೇಶನ್ ನಿಂದ ನೀಡಲಾಗುವುದು. ಬನ್ನಂಜೆ 90 ಅನ್ನು ಇಲ್ಲಿಗೆ ನಿಲ್ಲಿಸದೆ ಅದನ್ನು‌ ಅನಂತದವರೆಗೆ ಕೊಂಡೊಯ್ಯಬೇಕು‌ ಎಂದರು.

ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ, ತರಂಗದ ವ್ಯವಸ್ಥಾಪಕ ಸಂಪಾದಕಿ ಸಂಧ್ಯಾ ಪೈ, ಹಿರಿಯ ವಿಜ್ಞಾನಿ ನಾಡೋಜ ಪ್ರೊ.ಕೆ.ಪಿ.ರಾವ್, ಉಡುಪಿ ಎಂಜಿಎಂ ಕಾಲೇಜಿನ ಪ್ರಾಂಶುಪಾಲೆ ಪ್ರೊ.ವನಿತಾ ಮಯ್ಯ, ಮಾಜಿ ಶಾಸಕ ರಘುಪತಿ ಭಟ್ ಮುಖ್ಯ ಅತಿಥಿಗಳಾಗಿದ್ದರು.

ವೇದಿಕೆಯಲ್ಲಿ ಗೋವಿಂದಾಚಾರ್ಯ ಪ್ರತಿಷ್ಠಾನದ ಮುಖ್ಯಸ್ಥೆ ವೀಣಾ ಬನ್ನಂಜೆ, ಸಮಿತಿ ಅಧ್ಯಕ್ಷ ವಿಶ್ವನಾಥ ಶೆಣೈ, ಬನ್ನಂಜೆ ಉಪಸ್ಥಿತರಿದ್ದರು. ಪ್ರತಿಷ್ಠಾನದ ಅಧ್ಯಕ್ಷ ಮಲ್ಲೇಪುರಂ ಜಿ.ವೆಂಕಟೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಿತಿಯ ಪ್ರಧಾನ ಕಾರ್ಯದರ್ಶಿ ಅಸ್ಟ್ರೋ ಮೋಹನ್ ಸ್ವಾಗತಿಸಿದರು. ಪೂರ್ಣಿಮಾ ಜನಾರ್ದನ ಕಾರ್ಯಕ್ರಮ ನಿರೂಪಿಸಿದರು.