ಉಡುಪಿ: ರಾಜ್ಯ ಸರಕಾರವು ಮ್ಯಾನೇಜ್ಮೆಂಟ್ ಲಾಬಿಗೆ ತಲೆಬಾಗಿದ್ದು, ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಲ್ಲಿ ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಪ್ರವೇಶ ಕಡ್ಡಾಯ ನಿಯಮವನ್ನು ರದ್ದುಗೊಳಿಸಿದೆ. ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಿಗೆ ಅಲ್ಪಸಂಖ್ಯಾತ ಮಾನ್ಯತೆ ನೀಡಿದರೆ ರಾಜ್ಯದ ಶಿಕ್ಷಣ ವ್ಯವಸ್ಥೆಯ ಮೇಲೆ ದೊಡ್ಡ ದುಷ್ಪರಿಣಾಮ ಬೀರಲಿದೆ ಎಂದು ಮಾಜಿ ಶಾಸಕ ಅರುಣ್ ಶಹಾಪುರ ಆರೋಪಿಸಿದ್ದಾರೆ.
ಉಡುಪಿ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಇಂದು ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ತಾನು ಅಹಿಂದ ಪರ ಎನ್ನುವ ರಾಜ್ಯ ಸರಕಾರ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಲ್ಲಿ, ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಅಗತ್ಯವಿಲ್ಲ ಎನ್ನುವ ಮೂಲಕ ಎಸ್.ಸಿ/ಎಸ್.ಟಿಗಳಿಗೆ ದ್ರೋಹ ಬಗೆದಿದೆ. ಶಿಕ್ಷಣ ಹಕ್ಕು ಕಾಯ್ದೆಯನ್ನು ಉಲ್ಲಂಘಿಸಿದೆ ಎಂದು ಆರೋಪಿಸಿದ ಅವರು, ಶಿಕ್ಷಣ ಸಂಸ್ಥೆಗಳು ಮಕ್ಕಳ ಆಧಾರಿತ ಆಗಿರಬೇಕೇ ಹೊರತು ಆಡಳಿತ ಮಂಡಳಿ ಆಧಾರಿತವಾಗಿರಬಾರದು ಎಂದರು.
ಗದಗಿನ ಪಂಚಾಯತ್ ಮತ್ತು ಗ್ರಾಮೀಣಭಿವೃದ್ದಿ ವಿಶ್ವವಿದ್ಯಾಲಯದ ಕುಲಪತಿ ಅಧಿಕಾರವನ್ನು ರಾಜ್ಯಪಾಲರಿಂದ ಕಿತ್ತುಕೊಂಡು, ಮುಖ್ಯಮಂತ್ರಿಗಳಿಗೆ ನೀಡುವ ಹುನ್ನಾರ ನಡೆಸುತ್ತಿದೆ. ಇದರಿಂದ ವಿವಿಗಳಲ್ಲಿ ರಾಜಕೀಯ ಹಸ್ತಕ್ಷೇಪಕ್ಕೆ ಕಾರಣವಾಗುತ್ತದೆ. ಆದ್ದರಿಂದ ಬೆಳಗಾವಿ ಅಧಿವೇಶನದಲ್ಲಿ ಈ ತಿದ್ದುಪಡಿಗೆ ಅವಕಾಶ ನೀಡಬಾರದು ಎಂದು ಒತ್ತಾಯಿಸಿದರು.

