ಉಡುಪಿ: ಕಳೆದ ಮಳೆಗಾಲದ ನಂತರ ಜಿಲ್ಲೆಯ ಬಹುತೇಕ ಕಡೆ ರಸ್ತೆಗಳು ಸಂಚರಿಸಲಾಗದಷ್ಟು ಹದಗೆಟ್ಟಿವೆ. ಆತ್ರಾಡಿ – ಅಂಗಾರಕಟ್ಟೆ- ಎಡ್ಮೇರ್ ಆಗಿ ಪಳ್ಳಿ ಕಾರ್ಕಳಕ್ಕೆ ಹೋಗುವ ರಸ್ತೆ ಸಂಪೂರ್ಣ ಹಾಳಾಗಿದ್ದು, ವಾಹನ ಸವಾರರು ಸಂಚರಿಸಲು ಪರದಾಡುವ ಸ್ಥಿತಿ ನಿರ್ಮಾಣ ಆಗಿದೆ.
ಇಲ್ಲಿನ ಪರಿಸ್ಥಿತಿ ನೋಡುವಾಗ ನಿಜಕ್ಕೂ ಇದೊಂದು ರಸ್ತೆಯಾ ಎಂಬ ಸಂಶಯ ಮೂಡುತ್ತದೆ. ಕಳೆದ ಕೆಲವು ಸಮಯಗಳಿಂದ ಈ ಭಾಗದ ಜನರು ಪಡುವ ಪಾಡು ಅಷ್ಟಿಷ್ಟಲ್ಲ. ಜಿಲ್ಲೆಯಲ್ಲಿ ಅಕಾಲಿಕ ಮಳೆಯೂ ಆಗೊಮ್ಮೆ ಈಗೊಮ್ಮೆ ಬಂದು ಹೋಗುತ್ತದೆ. ಹಾಗೆ ಮಳೆ ಬಂದರೆ ಈ ರಸ್ತೆ ಸ್ಥಿತಿಯನ್ನು ಕೇಳುವುದೇ ಬೇಡ.
ಭಾರೀ ವಾಹನಗಳ ಸಂಚಾರದ ಜೊತೆಗೆ ಕಟ್ಟಡ ಸಾಮಗ್ರಿ ಸಾಗಿಸುವ ವಾಹನಗಳ ಓಡಾಟವೂ ಈ ರಸ್ತೆಯಲ್ಲಿ ಹೆಚ್ಚು. ಇದರಿಂದಾಗಿ ಇದ್ದ ಹೊಂಡಗಳು ಮತ್ತಷ್ಟು ಬಾಯ್ದೆರೆದುಕೊಂಡಿವೆ. ಸಣ್ಣ ವಾಹನಗಳು ಮತ್ತು ದ್ವಿಚಕ್ರ ವಾಹನ ಸವಾರರು ಈ ರಸ್ತೆಯಲ್ಲಿ ಸಂಚರಿಸಬೇಕಾದರೆ ಅಕ್ಷರಶಃ ಸರ್ಕಸ್ ಮಾಡಬೇಕು.
ಇಷ್ಟಾದರೂ ಕನಿಷ್ಠ ಪಕ್ಷ ಒಂದು ತೇಪೆ ಹಾಕುವ ಪ್ರಯತ್ನವನ್ನೂ ಸಂಬಂಧಪಟ್ಟವರು ಮಾಡಿಲ್ಲ ಎಂಬುದೇ ಆಶ್ಚರ್ಯ.ಇನ್ನಾದರೂ ಸ್ಥಳೀಯ ಜನಪ್ರತಿನಿಧಿಗಳು ಇತ್ತ ಕಡೆ ಗಮನ ಹರಿಸಿ ಆದಷ್ಟು ಬೇಗ ಈ ರಸ್ತೆಯನ್ನು ದುರಸ್ತಿ ಮಾಡಬೇಕೆಂಬುವುದು ಸಾರ್ವಜನಿಕರ ಆಗ್ರಹ.

