ಉಡುಪಿ: ಉಡುಪಿ ಜಮಾಅತೆ ಇಸ್ಲಾಮೀ ಹಿಂದ್ ವತಿಯಿಂದ ಸೆ. 3ರಿಂದ 14ರವರೆಗೆ “ನ್ಯಾಯದ ಹರಿಕಾರ ಪೈಗಂಬರ್ ಮುಹಮ್ಮದ್” ಅಭಿಯಾನವನ್ನು ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗಿದೆ ಎಂದು ಜಮಾಅತೆ ಇಸ್ಲಾಮೀ ಹಿಂದ್ ಉಡುಪಿ ನಗರ ಶಾಖೆಯ ಅಧ್ಯಕ್ಷ ನಿಸಾರ್ ಅಹ್ಮದ್ ತಿಳಿಸಿದರು.

ಉಡುಪಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರವಾದಿ ಮುಹಮ್ಮದ್ ನ್ಯಾಯ ಮತ್ತು ಮಾನವೀಯತೆಯ ಸಂದೇಶಗಳನ್ನು ನಾಡಿನ ಜನತೆಗೆ ತಲುಪಿಸುವುದು ಮತ್ತು ಪ್ರವಾದಿಯವರ ಬಗೆಗಿನ ತಪ್ಪು ಕಲ್ಪನೆಗಳನ್ನು ಹೋಗಲಾಡಿಸುವುದು ಹಾಗೂ ವಿವಿಧ ಧರ್ಮಿಯರ ನಡುವಿನ ಪರಸ್ಪರ ಸಂಬಂಧಗಳನ್ನು ಬಲಪಡಿಸುವುದು ಈ ಅಭಿಯಾನದ ಉದ್ದೇಶವಾಗಿದೆ ಎಂದರು.

ಈ ಅಭಿಯಾನದ ಪ್ರಯುಕ್ತ ಶಾಂತಿ ಪ್ರಕಾಶನ ಪ್ರಕಟಿಸಿರುವ ಪ್ರವಾದಿಯವರ ಬದುಕು ಮತ್ತು ಸಂದೇಶಗಳ ಬಗ್ಗೆ ಬೆಳಕು ಚೆಲ್ಲುವ ಎರಡು ಹೊಸ ಪುಸ್ತಕಗಳನ್ನು ರಾಜ್ಯಾದ್ಯಂತ ಬಿಡುಗಡೆಗೊಳಿಸಲಾಗುವುದು. ಈ ಅಭಿಯಾನದ ಭಾಗವಾಗಿ ರಾಜ್ಯಾದ್ಯಂತ ವಿವಿಧ ಸಮಾಜ ಸೇವಾ ಚಟುವಟಿಕೆಗಳು, ಸಂವಾದ, ವಿಚಾರಗೋಷ್ಠಿ, ಸಾರ್ವಜನಿಕ ಸಭೆಗಳು, ಪ್ರಬಂಧ ಸ್ಪರ್ಧೆ ಮುಂತಾದ ಹಲವು ಕಾರ್ಯಕ್ರಮಗಳು ನಡೆಯಲಿವೆ ಎಂದು‌ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಅಭಿಯಾನದ ಸಂಚಾಲಕ ಫಾರೂಕ್ ಮಣಿಪಾಲ, ಸ್ವಾಗತ ಸಮಿತಿ‌ ಸದಸ್ಯರಾದ ಸುಂದರ್ ಮಾಸ್ತರ್, ರಈಸ್ ಅಹಮದ್, ಚಾರ್ಲ್ಸ್ ಆಂಗ್ಲರ್, ಜಮಾಅತೆ ಇಸ್ಲಾಮೀ ಹಿಂದ್ ಮಹಿಳಾ ಸಂಚಾಲಕಿ ವಾಜಿದಾ ತಬಸ್ಸುಮ್ ಉಪಸ್ಥಿತರಿದ್ದರು.