ಉಡುಪಿ: ಕರಾವಳಿ ಭಾಗದ ಜೀವನಾಡಿಯಾಗಿರುವ ಮೀನುಗಾರಿಕೆ ಸಾವಿರಾರು ಕುಟುಂಬಗಳ ಬದುಕಿನ ಆಧಾರ. ಆದರೆ ಸಮುದ್ರದ ಅಲೆಗಳ ನಡುವೆ ಜೀವವನ್ನು ಪಣಕ್ಕಿಟ್ಟು ದುಡಿಯುವ ಮೀನುಗಾರರ ಬದುಕು ಮಾತ್ರ ಇಂದಿಗೂ ಅತಂತ್ರವಾಗಿದೆ. ಕಳೆದ ಆರು ವರ್ಷಗಳಲ್ಲಿ ಉಡುಪಿ ಜಿಲ್ಲೆಯಲ್ಲೇ 96 ಮೀನುಗಾರರು ಪ್ರಾಣ ಕಳೆದುಕೊಂಡಿದ್ದು, 17 ಮೀನುಗಾರಿಕಾ ದೋಣಿಗಳು ಹಾನಿಗೀಡಾಗಿವೆ. ಸರ್ಕಾರದಿಂದ ₹7.78 ಕೋಟಿ ಪರಿಹಾರ ಮಂಜೂರಾಗಿದ್ದರೂ, ಜೀವಹಾನಿ ತಡೆಯಲು ಅಗತ್ಯ ಸುರಕ್ಷತಾ ಕ್ರಮಗಳ ಕೊರತೆ ಮುಂದುವರಿದಿದೆ.
ಅಲೆಗಳ ಅಬ್ಬರ, ಗಾಳಿಯ ವೇಗ, ಕ್ಷಣಕ್ಷಣಕ್ಕೂ ಬದಲಾಗುವ ಸಮುದ್ರದ ಸ್ವಭಾವ, ಇವೆಲ್ಲದರ ನಡುವೆಯೂ ಕುಟುಂಬದ ಬದುಕಿಗಾಗಿ ಪ್ರತಿದಿನ ಸಮುದ್ರಕ್ಕಿಳಿಯುತ್ತಾರೆ ಮೀನುಗಾರರು. ಮೀನುಗಾರಿಕೆ ಕರಾವಳಿಯ ಆರ್ಥಿಕ ಜೀವಾಳವಾದರೂ, ಮೀನುಗಾರರ ಜೀವಕ್ಕೆ ಮಾತ್ರ ಇನ್ನೂ ಸೂಕ್ತ ಭದ್ರತೆ ಸಿಕ್ಕಿಲ್ಲ.
ಕಳೆದ ಆರು ವರ್ಷಗಳಲ್ಲಿ ಜಿಲ್ಲೆಯ 96 ಮೀನುಗಾರರು ವಿವಿಧ ಅಪಘಾತಗಳಲ್ಲಿ ಮೃತಪಟ್ಟಿದ್ದಾರೆ. ಇದೇ ಅವಧಿಯಲ್ಲಿ 17 ಮೀನುಗಾರಿಕಾ ದೋಣಿಗಳು ಸಮುದ್ರದ ಅಬ್ಬರಕ್ಕೆ ಸಿಲುಕಿ ಹಾನಿಗೀಡಾಗಿವೆ. ಸರ್ಕಾರದಿಂದ ₹7.78 ಕೋಟಿ ಪರಿಹಾರ ನೀಡಲಾಗಿದ್ದರೂ, ಜೀವಹಾನಿ ತಡೆಯುವ ಶಾಶ್ವತ ಕ್ರಮಗಳ ಅಗತ್ಯ ಹೆಚ್ಚಾಗಿದೆ.
ಹವಾಮಾನ ವೈಪರೀತ್ಯ, ಬಿರುಗಾಳಿ, ಯಾಂತ್ರಿಕ ದೋಷ ಸೇರಿದಂತೆ ಹಲವು ಕಾರಣಗಳಿಂದ ಸಮುದ್ರದಲ್ಲಿ ಅಪಾಯಗಳು ಹೆಚ್ಚುತ್ತಿವೆ. ಇಂತಹ ಸಂದರ್ಭಗಳಲ್ಲಿ ತ್ವರಿತ ರಕ್ಷಣಾ ಕಾರ್ಯಾಚರಣೆ ಸಾಧ್ಯವಾಗುವಂತೆ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಿ ಪ್ರತಿಯೊಂದು ಮೀನುಗಾರಿಕಾ ಬೋಟ್ ಮೇಲೂ ನಿಗಾ ವ್ಯವಸ್ಥೆ ಜಾರಿಯಾಗಬೇಕೆಂದು ಮೀನುಗಾರರು ಆಗ್ರಹಿಸುತ್ತಿದ್ದಾರೆ.
ಮೀನುಗಾರಿಕೆಗೆ ತೆರಳುವ ಪ್ರತಿಯೊಬ್ಬರಿಗೂ ಕಡ್ಡಾಯವಾಗಿ ಗುಣಮಟ್ಟದ ಲೈಫ್ ಜಾಕೆಟ್, ಸುರಕ್ಷತಾ ಸಾಧನಗಳನ್ನು ಒದಗಿಸಬೇಕು. ಸಮುದ್ರದಲ್ಲಿ ಅಪಘಾತ ಸಂಭವಿಸಿದರೆ ತಕ್ಷಣ ಮಾಹಿತಿ ಸಿಗುವ ತಂತ್ರಜ್ಞಾನ ಜಾರಿಗೆ ಬರಬೇಕು. ಅಲ್ಲದೆ ಮೀನುಗಾರ ಮೃತಪಟ್ಟರೆ ನೀಡುವ ಪರಿಹಾರ ಮೊತ್ತವನ್ನೂ ಹೆಚ್ಚಿಸಬೇಕೆಂಬುದು ಮೀನುಗಾರರ ಪ್ರಮುಖ ಬೇಡಿಕೆಯಾಗಿದೆ.
ಕರಾವಳಿಯ ಆರ್ಥಿಕತೆಗೆ ಬೆನ್ನೆಲುಬಾಗಿರುವ ಮೀನುಗಾರರ ಜೀವ ರಕ್ಷಣೆ ಸರ್ಕಾರದ ಮೊದಲ ಆದ್ಯತೆಯಾಗಬೇಕಿದೆ. ಪರಿಹಾರ ನೀಡುವುದಕ್ಕಿಂತ ಜೀವ ಉಳಿಸುವ ವ್ಯವಸ್ಥೆಗಳೇ ಹೆಚ್ಚು ಅಗತ್ಯ ಎಂಬುದು ಮೀನುಗಾರರ ಒತ್ತಾಯ. ಲೈಫ್ ಜಾಕೆಟ್, ಅತ್ಯಾಧುನಿಕ ಟ್ರ್ಯಾಕಿಂಗ್ ವ್ಯವಸ್ಥೆ ಹಾಗೂ ತ್ವರಿತ ರಕ್ಷಣಾ ಕ್ರಮಗಳು ಜಾರಿಯಾದಾಗ ಮಾತ್ರ ಸಮುದ್ರಕ್ಕಿಳಿಯುವ ಮೀನುಗಾರರ ಬದುಕಿಗೆ ನಿಜವಾದ ಭದ್ರತೆ ಸಿಗಲಿದೆ.

